ಬೆಂಗಳೂರು : ಕೊರೊನಾ ಕಷ್ಟಕಾಲದಲ್ಲಿ ಎಲ್ಲರೂ ಚಿಂತೆಯಲ್ಲಿರುವಾಗ ವೀರಶೈವ ಲಿಂಗಾಯತ ಒಳಗೊಂಡಂತೆ ನಾನಾ ಸಮುದಾಯಕ್ಕೆ ಸೇರಿದ 182 ಮಠ ಮಾನ್ಯಗಳ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರಕಾರ 88.75 ಕೋಟಿ ರೂ. ಬಿಡುಗಡೆ ಮಾಡಿದೆ.
2019-20 ಹಾಗೂ 2020-21ರ ಬಜೆಟ್ ನಲ್ಲಿ ಮಠ, ಧಾರ್ಮಿಕ ಸಂಘ, ಸಂಸ್ಥೆಗಳಿಗೆ ಅನುದಾನ ಘೋಷಿಸಲಾಗಿತ್ತು.
ದಿಢೀರ್ ಈ ಸಂಬಂಧ ಶುಕ್ರವಾರ ಆದೇಶ ಹೊರಡಿಸಿರುವುದು ಮಹತ್ವ ಪಡೆದುಕೊಂಡಿದೆ.
ಎಲ್ಲ ಜಾತಿ, ವರ್ಗಗಳ ಮಠಗಳ ಮೂಲಸೌಕರ್ಯ ಸಂಬಂಧ 2008 ರಿಂದ 2013ರ ಅವಧಿಯ ಬಿಜೆಪಿ ಸರಕಾರ ಸಾಕಷ್ಟು ಅನುದಾನ ನೀಡಿತ್ತು.
ಉಪ ಚುನಾವಣೆ ಗೆಲುವಿನ ಬಳಿಕ ಆತ್ಮವಿಶ್ವಾಸದಲ್ಲಿರುವ ಸಿಎಂ ಅವರು ಸಂಪುಟ ಪುನರ್ ರಚನೆಗೆ ಮನಸ್ಸು ಮಾಡಿದ್ದಾರೆ.
ಈ ಸಂಬಂಧ ಚರ್ಚಿಸಲು ಹೈಕಮಾಂಡ್ ನ ಕರೆಗಾಗಿ ಕಾಯುತ್ತಿದ್ದಾರೆ.
ಇದರ ಮಧ್ಯೆ ಅವರು ಮಠ ಮಂದಿರಗಳಿಗೆ ಅನುದಾನ ಬಿಡುಗಡೆ ಮಾಡಿಸಿರುವುದು ಕುತೂಹಲ ಮೂಡಿಸುವಂತಿದೆ.
2019-20ರ ಮುಂಗಡ ಪತ್ರದಲ್ಲಿ 39 ಮಠ, ಸಂಘ, ಸಂಸ್ಥೆಗಳಿಗೆ 39 ಕೋಟಿ ರೂ. 2020-21ರಲ್ಲಿ 143 ಮಠಗಳಿಗೆ 49.75 ಕೋಟಿ ರೂ. ಘೋಷಿಸಲಾಗಿತ್ತು.
ಇದರ ಒಟ್ಟು ಮೊತ್ತ 88.75 ಕೋಟಿ ರೂ. ಅನ್ನು ಈಗ ಬಿಡುಗಡೆ ಮಾಡಲಾಗಿದೆ. ಈ ಪೈಕಿ 49 ಮಠ, ಸಂಸ್ಥೆಗಳಿಗೆ ತಲಾ 1 ಕೋಟಿ ರೂ. ನೀಡಲಾಗುತ್ತಿದೆ.
PublicNext
14/11/2020 08:24 am