ದಾವಣಗೆರೆ: ಸಿಇಟಿಯಲ್ಲಿ ಕಡಿಮೆ ಅಂಕ ಬಂದ ಕಾರಣಕ್ಕೆ ಮನನೊಂದು ವಿದ್ಯಾರ್ಥಿನಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಗಳೂರು ಪಟ್ಟಣದ ಮುಸ್ಲಿಂ ಕಾಲೋನಿಯ ಮೂರನೇ ತಿರುವಿನಲ್ಲಿ ನಡೆದಿದೆ.
18 ವರ್ಷದ ಚೈತ್ರಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ದ್ವಿತೀಯ ಪಿಯುಸಿ ಮುಗಿಸಿದ ಬಳಿಕ ಎಂಬಿಬಿಎಸ್ ಓದಬೇಕೆಂಬ ಕನಸು ಕಂಡಿದ್ದ ಚೈತ್ರಾ ಇದಕ್ಕಾಗಿ ಸಾಕಷ್ಟು ಕಠಿಣ ಅಭ್ಯಾಸ ಮಾಡಿದ್ದಳು. ಸಿಇಟಿಯಲ್ಲಿ ರ್‍ಯಾಂಕ್ ಬರುವ ವಿಶ್ವಾಸ ಹೊಂದಿದ್ದಳು. ಹಗಲಿರುಳು ಓದಿದ್ದಳು. ಆದ್ರೆ, ಸಿಇಟಿಯಲ್ಲಿ ಕಡಿಮೆ ರ್ಯಾಂಕ್ ಬಂದಿತ್ತು. ಇದರಿಂದ ಊಟ, ನಿದ್ದೆ ಮಾಡದೇ ಖಿನ್ನತೆಗೆ ಒಳಗಾಗಿದ್ದಳು.
ಪೋಷಕರು ಬೇರೆ ಊರಿಗೆ ಹೋದಾಗ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣಿಗೆ ಕೊರಳೊಡ್ಡಿ ಸಾವಿಗೆ ಶರಣಾಗಿದ್ದಾಳೆ. ಬದುಕಿ ಬಾಳಬೇಕಿದ್ದ ವಿದ್ಯಾರ್ಥಿನಿ ಈ ರೀತಿಯ ಸಾವು ಕಂಡಿದ್ದಕ್ಕೆ ನೆರೆಹೊರೆಯವರು, ಸ್ನೇಹಿತರು, ಕುಟುಂಬ ವರ್ಗದವರ ಆಕ್ರಂದನ ಮುಗಿಲು ಮುಟ್ಟಿತ್ತು. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪಿಎಸ್ಐ ಮಹೇಶ್ ಹೊಸಪೇಟೆ, ಪ್ರೊಬೆಷನರಿ ಪಿಎಸ್ಐ ಶಿವಾನಂದ್, ಸಿಬ್ಬಂದಿಯಾದ ರಮೇಶ್, ರಾಜಪ್ಪ, ಮೇಘಲತಾ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
PublicNext
08/09/2022 06:50 pm