ರಾಯ್‌ಪುರ: ಸೆಲ್ಫಿ ಫೋಟೋ ಹುಚ್ಚಿಗೆ ಮಧ್ಯಪ್ರದೇಶದ ಒಂದೇ ಕುಟುಂಬದ 6 ಮಂದಿ ಬಲಿಯಾದ ಘಟನೆ ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ.
ಮೃತರೆಲ್ಲರೂ ಮಧ್ಯಪ್ರದೇಶದ ಅವಿಭಕ್ತ ಕುಟುಂಬದವರಾಗಿದ್ದರು. ಇವರು ಭಾನುವಾರ (ಆಗಷ್ಟ್ 28ರಂದು) ಛತ್ತೀಸ್‌ಗಢದ ರಾಮದಾಹ ಜಲಪಾತಕ್ಕೆ ಬಂದಿದ್ದರು. ಈ ವೇಳೆ ಇಬ್ಬರು ಮಹಿಳೆಯರು ಸೆಲ್ಫಿ ತೆಗೆದುಕೊಳ್ಳಲು ಜಲಪಾತಕ್ಕೆ ಇಳಿದಾಗ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆ ಇಬ್ಬರು ಮಹಿಳೆಯರು ಜಲಪಾತದಲ್ಲಿ ಕೊಚ್ಚಿ ಹೋಗುವಾಗ ಅವರನ್ನು ಮುಳುಗದಂತೆ ರಕ್ಷಿಸಲು ಕುಟುಂಬದ ಇತರ ಸದಸ್ಯರು ನೀರಿಗೆ ಹಾರಿದ್ದಾರೆ. ಸುತ್ತಲೂ ಇದ್ದವರು ನೋಡನೋಡುತ್ತಿದ್ದಂತೆ ಅವರೂ ಕೂಡ ನೀರಿನಲ್ಲಿ ಮುಳುಗಿದ್ದಾರೆ. ಭಾನುವಾರ ಸಂಜೆ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸೋಮವಾರ ಬೆಳಗ್ಗೆ ಇತರ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಈ ಘಟನೆಯಲ್ಲಿ ಸಾವಿನ ಸಂಖ್ಯೆ 6ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು. ಜಲಪಾತದಲ್ಲಿ ಜನರು ಸ್ನಾನ ಮಾಡದಂತೆ ಸ್ಥಳದಲ್ಲಿ ಎಚ್ಚರಿಕೆ ಫಲಕವನ್ನು ಹಾಕಿದ್ದರೂ, ಪ್ರವಾಸಿಗರು ಆಳವಾದ ನೀರಿನಲ್ಲಿ ಇಳಿದಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
PublicNext
01/09/2022 02:29 pm