ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿಯ ಕೋಟೆ ಬೀದಿಯಲ್ಲಿರುವ ಬಾಡಿಗೆ ಮನೆಗೆ ಬಂದಿದ್ದ ಮನೆಗಳ್ಳರು ಮನೆಯ ಸ್ನಾನ ಗೃಹದಲ್ಲಿ ಸುಮಾರು 12 ಅಡಿಯ ಸುರಂಗ ಕೊರೆದು ಮಾದಕ ವಸ್ತು ಹಾಗೂ ಮಾರಕಾಸ್ತ್ರಗಳನ್ನು ಸಂಗ್ರಹಿಸಿಟ್ಟಿದ್ದಾರೆ.
ಪವಿತ್ರರಾಜ್ ಎಂಬಾತ ಈ ಮನೆಯ ಮಾಲೀಕ. ತಸ್ಲೀಮ್ ಎಂಬಾಕೆಗೆ ಮನೆ ಬಾಡಿಗೆ ನೀಡಿದ್ದರು. ತಸ್ಲೀಮ್ ತನ್ನ 5 ಗಂಡು ಮಕ್ಕಳೊಂದಿಗೆ ಈ ಮನೆಯಲ್ಲಿ ವಾಸವಾಗಿದ್ದಳು. ತುಂಬ ಹಳೇ ಮನೆಯಾಗಿದ್ರಿಂದ ಶಿಥಿಲಾವಸ್ಥೆ ತಲುಪಿತ್ತು. ಹೀಗಾಗಿ ಮನೆ ಖಾಲಿ ಮಾಡುವಂತೆ ತಸ್ಲೀಮ್ ಹಾಗೂ ಆಕೆಯ ಮಕ್ಕಳಿಗೆ 2 ತಿಂಗಳಿನಿಂದ ಸೂಚನೆ ನೀಡುತ್ತಾ ಬಂದಿದ್ರು. ಆದರೆ ಇಲ್ಲಸಲ್ಲದ ಸಬೂಬು ಹೇಳಿಕೊಂಡು ಮನೆ ಖಾಲಿ ಮಾಡಿರಲಿಲ್ಲ.
ಮೊನ್ನೆ ಸುರಿದ ಧಾರಾಕಾರ ಮಳೆಗೆ ಆ ಮನೆಯ ಗೋಡೆ ಕುಸಿದು ಬಿದ್ದಿತ್ತು. ಹೀಗಾಗಿ ಮನೆಯ ಒಳಭಾಗಕ್ಕೆ ಹೋಗಿ ನೋಡಿದ ಪವಿತ್ರರಾಜ್‌ಗೆ ಕಂಡಿದ್ದು 12 ಅಡಿಯ ಸುರಂಗ. ಇದರಲ್ಲಿ ಮಾರಕಾಸ್ತ್ರ ಹಾಗೂ ಮಾದಕ ವಸ್ತುಗಳನ್ನು ನೋಡಿದಾಕ್ಷಣ ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಬಾಡಿಗೆ ಮನೆಯಲ್ಲಿದ್ದ ತಸ್ಲೀಮ್ ಹಾಗೂ ಆಕೆಯ ಮಕ್ಕಳು ಪರಾರಿಯಾಗಿದ್ದು ಆರೋಪಿಗಳ ಪತ್ತೆಗೆ ಪೊಲಿಸರು ಬಲೆ ಬೀಸಿದ್ದಾರೆ.
PublicNext
31/08/2022 05:23 pm