ದಾವಣಗೆರೆ: ಅಕ್ರಮವಾಗಿ ಬೆಳ್ಳಿ ಗೆಜ್ಜೆ ತಂದಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬಡಾವಣೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ 102ಕೆಜಿ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಮಿಳುನಾಡಿನ ಸೇಲಂನ ಸೆಲ್ವಂ ಮತ್ತು ಬಾಲಾಜಿ ಬಂಧಿತ ಆರೋಪಿಗಳು. ತಮಿಳುನಾಡಿನ ಸೇಲಂ ನಿಂದ ಅನಧಿಕೃತವಾಗಿ 20 ಲಕ್ಷ ರೂಪಾಯಿ ಮೌಲ್ಯದ 102 ಕೆಜಿ ಬೆಳ್ಳಿ ಗೆಜ್ಜೆ ತಂದಿದ್ದ ಇಬ್ಬರನ್ನು ವಿಚಾರಣೆ ನಡೆಸಿದಾಗ ಯಾವುದೇ ದಾಖಲಾತಿಗಳು ಸಿಕ್ಕಿಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದಾವಣಗೆರೆಗೆ ಕಳೆದ ಜುಲೈ 3 ರಂದು ಬಂದಿದ್ದಾರೆ. ಇಬ್ಬರ ಬಳಿಯೂ ಬೆಳ್ಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆ ಇರಲಿಲ್ಲ. ಮಾರಾಟ ಮಾಡಲು ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ. ಯಾವ ಕಾರಣದಿಂದ ಇಷ್ಟೊಂದು ಪ್ರಮಾಣದ ಬೆಳ್ಳಿ ತಂದಿದ್ದರು, ಕಳ್ಳತನ ಮಾಡಿ ಇಲ್ಲಿ ಮಾರಾಟ ಮಾಡಲು ಬಂದಿರಬಹುದಾ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
PublicNext
05/07/2022 07:39 pm