ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧನವಾದ ಎಡಿಜಿಪಿ ಅಮೃತ್ ಪಾಲ್ ರನ್ನು ಮೆಡಿಕಲ್ ಚೆಕ್ ಅಪ್ ಮಾಡಿಸಿ ಜಡ್ಜ್ ಮುಂದೆ ಹಾಜರು ಪಡಿಸಲಾಯಿತು. ವಿಚಾರಣೆ ಹಿನ್ನೆಲೆ ಕೋರ್ಟ್ ಗೆ ಹಾಜರುಪಡಿಸಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
ಪ್ರಕರಣದ ಕೇಂದ್ರ ಬಿಂದುವಾಗಿರುವ ಅಮೃತ್ ಪಾಲ್‌ನನ್ನು ಬಂಧಿಸುವ ಮೂಲಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಎಡಿಜಿಪಿ ದರ್ಜೆಯ ಅಧಿಕಾರಿಯನ್ನು ಮೊದಲ ಬಾರಿಗೆ ಬಂಧಿಸಿದಂತಾಗಿದೆ.
ಪಿಎಸ್ ಐ ನೇಮಕಾತಿ ಅಕ್ರಮ ನಡೆದಿರೋದು ಕಲಬುರಗಿಯಲ್ಲಿ ಬೆಳಕಿಗೆ ಬಂದಿತ್ತು. ಪ್ರಕರಣ ಸಂಬಂಧ ದಿವ್ಯಾ ಹಾಗರಗಿ, ಆರ್.ಡಿ. ಪಾಟೀಲ್ ಸೇರಿದಂತೆ ಕೆಲ ಪಿಎಸ್ ಐ ಅಭ್ಯರ್ಥಿಗಳು ಹಾಗೂ ಹಾಲಿ ಡಿವೈಎಸ್ಪಿ , ಪಿಎಸ್ ಐ, ಸಿಬ್ಬಂದಿಯನ್ನು ಬಂಧಿಸಲಾಗಿತ್ತು. ತನಿಖೆ ಮುಂದುವರಿದಂತೆ ರಾಜಧಾನಿಯಲ್ಲಿಯೂ ನೇಮಕಾತಿಯಲ್ಲಿ ಅಕ್ರಮ ಎಸಗಿರುವುದು ಬೆಳಕಿಗೆ ಬಂದ ಹಿನ್ನೆಲೆ ರಾಜ್ಯ ಸರ್ಕಾರ ತನಿಖೆ ಸಿಐಡಿ ತನಿಖೆಗೆ ವಹಿಸಿತ್ತು.
ಈ ಹಿನ್ನೆಲೆ ಸಿಐಡಿ ಪೊಲೀಸ್ರು ಹೈಗ್ರೌಂಡ್ಸ್ ಠಾಣೆಯಲ್ಲಿ 22 ಮಂದಿ ವಿರುದ್ದ ಎಫ್ ಐಆರ್ ದಾಖಲಿಸಿದ್ರು. ಅಭ್ಯರ್ಥಿಗಳ ವಿಚಾರಣೆ ವೇಳೆ ನೇಮಕಾತಿ ವಿಭಾಗದ ಅಧಿಕಾರಿಗಳ ಹೆಸರು ಬಾಯ್ಬಿಟ್ಟಿದ್ದರು. ನೇಮಕಾತಿ ವಿಭಾಗ ಡಿವೈಎಸ್ ಪಿಯಾಗಿದ್ದ ಶಾಂತಕುಮಾರ್ ಸಹಿತ ಹಲವು ಮಂದಿ ಸಿಬ್ಬಂದಿಯನ್ನು ಬಂಧಿಸಲಾಗಿತ್ತು.
ಶಾಂತಕುಮಾರ್ ಬಂಧನ ಬಳಿಕ ಎಡಿಜಿಪಿ ಅಮೃತ್ ಪಾಲ್ ಹೆಸರು ಕೇಳಿ ಬಂದಿತ್ತು. ಹೀಗಾಗಿ ಅಮೃತ್ ಪಾಲ್ ನನ್ನು 3 ಬಾರಿ ವಿಚಾರಣೆ ನಡೆಸಿದ್ದರು. ಇತ್ತೀಚೆಗೆ ಪಿಎಸ್ಐ ನೇಮಕಾತಿ ಕೇಸ್ ಬಗ್ಗೆ ಸಿಐಡಿಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಈ ನಿಟ್ಟಿನಲ್ಲಿ ವಿಚಾರಣೆಗೆ ಕರೆಯಿಸಿ ಪಾಲ್ ನನ್ನು ಸಿಐಡಿ ಬಂಧಿಸಿದೆ.
ಯಾವುದೇ ಸರ್ಕಾರಿ ಅಧಿಕಾರಿ ಯಾವುದೇ ಕೇಸ್ ನಲ್ಲಿ ಬಂಧನವಾದರೆ 24 ಗಂಟೆಯೊಳಗೆ ಸಸ್ಪೆಂಡ್ ನಿಯಮ ಜಾರಿ ಬರಲಿದೆ. ಇದರಂತೆ ಪಂಜಾಬ್ ಮೂಲದ ಅಮೃತ್ ಪಾಲ್ ಸಹ ಅಮಾನತು ಆಗಲಿದ್ದಾರೆ. ಮತ್ತೊಂದೆಡೆ ಕಸ್ಟಡಿ ಮುಗಿದ ಬಳಿಕ ಸಿಐಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿದ್ದು, ಒಂದು ವೇಳೆ ಜಾಮೀನು ಸಿಕ್ಕಿ ಹೊರಬಂದರೂ ಕರ್ತವ್ಯದಲ್ಲಿ ಮುಂದುವರೆಯಲು ಸಾಧ್ಯವಿಲ್ಲ.
10 ದಿನದ ಕಸ್ಟಡಿ ಬಳಿಕ ವಿಚಾರಣೆ ಪೂರ್ಣಗೊಂಡು ಅಮೃತ್ ಪಾಲ್ ಗೆ ಬೇಲ್ ಸಿಕ್ಕಿದ್ರಷ್ಟೆ ಬಿಡುಗಡೆ ಭಾಗ್ಯ. ಇಲ್ಲದಿದ್ರೆ, ಜೈಲು ಸೇರುವ ಅನಿವಾರ್ಯತೆಯೂ ಬರಬಹುದು. ಇನ್ನು, ಸಿಐಡಿ ತನಿಖೆ ಬೆನ್ನಲ್ಲೇ ಇಲಾಖಾ ವಿಚಾರಣೆ ಕೂಡ ಅಮೃತ್ ಪಾಲ್ ಎದುರಿಸಬೇಕಾಗುತ್ತೆ.
PublicNext
04/07/2022 08:23 pm