ಮಂಡ್ಯ: ಈಶ್ವರನ ದೇವಸ್ಥಾನದಲ್ಲಿ ಹಾಡಹಗಲೇ ಕುಖ್ಯಾತ ರೌಡಿಯನ್ನ ಕೊಚ್ಚಿ ಕೊಲೆಗೈದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ.
ಅರುಣ್ ಅಲಿಯಾಸ್ ಅಲ್ಲು (38) ಕೊಲೆಯಾದ ರೌಡಿ. ಕೆ.ಆರ್.ಪೇಟೆ ಪಟ್ಟಣದ ಈಶ್ವರನ ದೇವಸ್ಥಾನದಲ್ಲಿ ಹಂತಕರು ಅರುಣ್‌ನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಕುಖ್ಯಾತ ರೌಡಿ ಅರುಣ್ ಕೊಲೆ, ಅಪಹರಣ, ಕೊಲೆ ಬೆದರಿಕೆ, ಹಫ್ತಾ ವಸೂಲಿ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಜೈಲಿನಲ್ಲಿದ್ದಾಗಲೇ ಅಧಿಕಾರಿಯ ಸಹಾಯ ಪಡೆದು ಮಾರ್ವಾಡಿ ಕಿಡ್ನಾಪ್ ಮಾಡಿದ್ದ. ಆ ಪ್ರಕರಣದಲ್ಲಿ ಜೈಲು ಅಧಿಕಾರಿಗೂ ಶಿಕ್ಷೆಯಾಗಿತ್ತು. ಎರಡನೇ ದರ್ಜೆ ರಾಜಕಾರಣಿಗಳಿಂದಲೂ ಹಫ್ತಾ ವಸೂಲಿ ಮಾಡಿರುವ ಆರೋಪ ಇತ್ತು. ಜೈಲಿನಿಂದ ಬಿಡುಗಡೆ ಮಾಡಿದ ಬಳಿಕ ಆತನನ್ನ ಗಡಿಪಾರು ಮಾಡಲಾಗಿತ್ತು. ಹೀಗಿದ್ದರೂ ಆತ ಕೆ.ಆರ್.ಪೇಟೆಗೆ ಬಂದಿದ್ದ. ಸ್ಕೆಚ್ ಹಾಕಿ ದೇಗುಲದಲ್ಲಿದ್ದ ಐವರು ಅರುಣ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದಿದ್ದಾರೆ.
ರೌಡಿ ಅರುಣ್ ಕೊಲೆಗೆ ಹಲವು ವರ್ಷಗಳಿಂದ ಸ್ಕೆಚ್ ಹಾಕಲಾಗಿತ್ತು. ಹಳೆಯ ದ್ವೇಷದಿಂದ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಕೆ.ಆರ್.ಪೇಟೆ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
27/06/2022 04:44 pm