ಲಕ್ನೋ: ರೊಟ್ಟಿಯ ವಿಚಾರಕ್ಕೆ ಆರಂಭವಾದ ಜಗಳದಲ್ಲಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ವ್ಯಕ್ತಿ ಕೊಲೆಯಾದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಸನ್ನಿ (30) ಎಂದು ಗುರುತಿಸಲಾಗಿದೆ. ಭಾನುವಾರ ನಗರದ ಚನೆಹಟಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ರೆಸ್ಟೋರೆಂಟ್ ಮಾಲೀಕರು ತಮ್ಮ ಸಿಬ್ಬಂದಿಯೊಂದಿಗೆ ಸನ್ನಿ ಮತ್ತು ಆತನ ಸೋದರಸಂಬಂಧಿಯನ್ನು ಥಳಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸನ್ನಿ ಸಾವನ್ನಪ್ಪಿದ್ದಾರೆ.
ಸನ್ನಿ ತನ್ನ ಬರ್ತ್‌ಡೇ ಪಾರ್ಟಿಗಾಗಿ ಚನೆಹಟಾ ಪ್ರದೇಶದ ರೆಸ್ಟೋರೆಂಟ್‌ಗೆ 150 ರೊಟ್ಟಿಗಳನ್ನು ಆರ್ಡರ್ ನೀಡಿದ್ದ. ಆದರೆ ರೆಸ್ಟೋರೆಂಟ್‌ನವರು ಕೇವಲ 40 ರೊಟ್ಟಿಗಳನ್ನು ಮಾತ್ರ ನೀಡಿದ್ದರು. ಇದರಿಂದಾಗಿ ಸನ್ನಿ ತನ್ನ ಸೋದರಸಂಬಂಧಿ ಜೊತೆಗೆ ರೆಸ್ಟೋರೆಂಟ್‌ಗೆ ಬಂದು ವಾಗ್ವಾದ ನಡೆದಿದ್ದ. ಈ ವೇಳೆ ರೆಸ್ಟೋರೆಂಟ್ ಮಾಲೀಕ ಜೀಶನ್ ಸನ್ನಿ ಹಾಗೂ ಆತನ ಸೋದರಸಂಬಂಧಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಪರಾರಗಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ಜೀಶನ್ ಪಾರಿಯಾಗಿದ್ದು, ಜೀಶನ್‌ನ ಇಬ್ಬರು ಸೋದರಸಂಬಂಧಿಗಳು ಮತ್ತು ಒಬ್ಬ ಕೆಲಸಗಾರನನ್ನು ಬಂಧಿಸಲಾಗಿದೆ. ಈ ಘಟನೆಯು ಎರಡು ಸಮುದಾಯಗಳಿಗೆ ಸಂಬಂಧಿಸಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಪಡೆಯನ್ನು ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
PublicNext
27/06/2022 04:14 pm