ಹೈದರಾಬಾದ್: ಆಸ್ತಿಯ ಮೇಲೆ ಕಣ್ಣಿಟ್ಟು ವ್ಯಕ್ತಿಯೊಬ್ಬನನ್ನು ಮದುವೆಯಾದ ಯುವತಿಯೊಬ್ಬಳು ಆತನಿಂದ ಆರೂವರೆ ಕೋಟಿ ರೂಪಾಯಿ ದೋಚಿದ ಘಟನೆ ಹೈದರಾಬಾದಿನಲ್ಲಿ ನಡೆದಿದೆ.
ಪತ್ನಿ ಹಾಗೂ ದುಡ್ಡು ಎರಡನ್ನೂ ಕಳೆದುಕೊಂಡ ವ್ಯಕ್ತಿ ಈಗ ಅಕ್ಷರಶಃ ಕಂಗಾಲಾಗಿದ್ದಾನೆ. ರವಿ ಕುಮಾರ ತಗರಂ ಎಂಬ ವ್ಯಕ್ತಿಯೊಬ್ಬರು ಮದುವೆ ಮಾಡಿಕೊಳ್ಳಲು ಕಳೆದ ಎರಡು ವರ್ಷಗಳಿಂದ ಕನ್ಯೆ ಹುಡುಕುತ್ತಿದ್ದರು. ಸೂಕ್ತ ವಧುವಿನ ಅನ್ವೇಷಣೆಗಾಗಿ ಅವರು ಮ್ಯಾಟ್ರಿಮೊನಿ ಏಜೆನ್ಸಿಯೊಂದಕ್ಕೆ ಹೋಗಿದ್ದರು. ಈ ಮ್ಯಾಟ್ರಿಮೊನಿ ಕಚೇರಿಯಲ್ಲಿ ಕೆಲಸ ಮಾಡುವ ರೀನಾ ಗೊರ್ಲೆ ಎಂಬ ಯುವತಿಯು ರವಿ ಕುಮಾರ ಅವರಿಗೆ ಪರಿಚಯವಾಗಿದ್ದಾಳೆ.
ಮದುವೆ ಮಾಡಿಕೊಳ್ಳುವ ಉದ್ದೇಶ ಇದ್ದುದರಿಂದ ಸಹಜವಾಗಿಯೇ ರವಿ ಕುಮಾರ ತಮ್ಮ ಸಾಕಷ್ಟು ವೈಯಕ್ತಿಕ ವಿವರಗಳನ್ನು ರೀನಾಳಿಗೆ ಹೇಳಿದ್ದರು. ರವಿ ಕುಮಾರ ಓರ್ವ ಶ್ರೀಮಂತ ವ್ಯಕ್ತಿಯಾಗಿರುವುದನ್ನು ಅರಿತ ರೀನಾ, ಆತನನ್ನು ಮದುವೆಯಾಗುವ ಪ್ಲ್ಯಾನ್ ಮಾಡಿದ್ದಳು. ರವಿಕುಮಾರ್ ನೊಂದಿಗೆ ಗೆಳೆತನ ಬೆಳೆಸಿದ ರೀನಾ, ಕೆಲ ದಿನಗಳ ನಂತರ ತನ್ನನ್ನು ಮದುವೆಯಾಗುವಂತೆ ಬೇಡಿಕೆ ಇಟ್ಟಿದ್ದಾಳೆ. ಕೊನೆಗೆ ಫೆಬ್ರವರಿ 2022ರಲ್ಲಿ ಇಬ್ಬರೂ ಮದುವೆಯಾಗಿದ್ದರು. ಮದುವೆಗೂ ಮುನ್ನ ತನಗೆ ಗೊತ್ತಿರುವ ಕಂಪನಿಯೊಂದರಲ್ಲಿ ರವಿಕುಮಾರ್‌ರಿಂದ ಆರೂವರೆ ಕೋಟಿ ರೂಪಾಯಿ ಇನ್ವೆಸ್ಟ್ ಮಾಡಿಸಿದ್ದಳು ಚಾಲಾಕಿ ರೀನಾ. ಮದುವೆಯ ನಂತರ ರವಿ ಕುಮಾರ್ ಹಣ ಏನಾಯ್ತೆಂದು ಕೇಳಿದ್ರೆ ರೌಡಿಗಳನ್ನು ಬಿಟ್ಟು ಹೆದರಿಸಿದ್ದಾಳೆ.
15 ದಿನಗಳ ನಂತರ ಇದೆಲ್ಲದರ ಬಗ್ಗೆ ತಿಳಿದುಕೊಂಡ ರವಿ ಕುಮಾರ್ ಸಹೋದರಿ ಹೈದರಾಬಾದ್ ಸಿಸಿಎಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ರೀನಾಳನ್ನು ವಿಚಾರಣೆ ನಡೆಸಿದಾಗ ಇದರ ಹಿಂದೆ ಇನ್ನೂ ಹಲವಾರು ವ್ಯಕ್ತಿಗಳಿರುವುದು ಬೆಳಕಿಗೆ ಬಂದಿದೆ. ಸುಧೀರ ಲೊಬ್ಬಾ, ರಘು, ಪ್ರಸಾದ, ವೆಂಕಟ್ ಮತ್ತು ಅನಿಲ್ ಎಂಬಾತರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
PublicNext
22/06/2022 04:30 pm