ಬೆಂಗಳೂರು: ಮೋಸ್ಟ್ ವಾಟೆಂಡ್ ಅಂಡ್ ಮೋಸ್ಟ್ ಡೇಂಜರ್ ಉಗ್ರ ತಾಲಿಬ್ ಹುಸೇನ್ನನ್ನು ಬೆಂಗಳೂರಲ್ಲಿ ಅರೆಸ್ಟ್ ಮಾಡಲಾಗಿದೆ. 8 ವರ್ಷದಿಂದ ಬೆಂಗಳೂರಲ್ಲೇ ಇದ್ದ ಉಗ್ರನನ್ನ ಮೇ 29ರಂದು ಜಮ್ಮು ಮತ್ತು ಕಾಶ್ಮೀರ ಖಾಕಿ ಟೀಂ, ಸ್ಥಳೀಯ ಪೊಲೀಸರ ನೆರವಿನಿಂದ ಅರೆಸ್ಟ್ ಮಾಡಿ ಕರೆದೊಯ್ದಿದ್ದರು. ಸದ್ಯ ಈಗ ಈತ ಒಬ್ಬ ಉಗ್ರ ಅನ್ನೋದು ಗೊತ್ತಾಗಿ, ಇಷ್ಟು ದಿನ ಆತನನ್ನ ನೋಡಿದವರು, ನೆರೆ ಹೊರೆಯವರು ಶಾಕ್ ಆಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ ಪಡೆದ ಮಾಹಿತಿಯನ್ನು ನಗರ ಪೊಲೀಸ್ ಆಯುಕ್ತರಿಗೆ ಗುಪ್ತಚರ ಇಲಾಖೆ ವರದಿ ನೀಡಿದೆ. ಶಂಕಿತ ಉಗ್ರನ ಮೇಲಿರುವ ಪ್ರಕರಣಗಳು, ಉಗ್ರನ ಚಟುವಟಿಕೆ, ಬೆಂಗಳೂರಿಗೆ ಬಂದಿದ್ದು ಯಾವಾಗ ಸೇರಿದಂತೆ ಪ್ರತಿಯೊಂದು ಅಂಶಗಳ ಬಗ್ಗೆ ಮಾಹಿತಿ ಕಲೆ ಹಾಕಿ ಕಮಿಷನರ್ ಪ್ರತಾಪ್ ರೆಡ್ಡಿ ಅವರಿಗೆ ಗುಪ್ತಚರ ಅಧಿಕಾರಿಗಳು ರಿಪೋರ್ಟ್ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕಿಸ್ತಾವರ್ ಠಾಣೆಯಲ್ಲಿ ತಾಲೀಬ್ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ ಮತ್ತು ಸ್ಫೋಟಕ ವಸ್ತು ಕಾಯ್ದೆಯಡಿ ಕೇಸ್ ದಾಖಲಾಗಿವೆ. 2007-08ರಿಂದ ನಡೆದ ಕೆಲ ಅಪರಾಧ ಕೃತ್ಯಗಳ ಬಗ್ಗೆ ತಾಲೀಬ್ ಹುಸೇನ್ ಭಾಗಿಯಾಗಿದ್ದ. ಈ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ತನಿಖೆ ನಡೆಸುತ್ತಿರುವುದು, ನಗರದಲ್ಲಿ ತಾಲಿಬ್ ಹುಸೇನ್ ನೆಲೆಸಿದ್ದ ಬಾಡಿಗೆ ಮನೆ, ಕೆಲಸ ಮಾಡುತ್ತಿದ್ದ ಜಾಗ, ಮಸೀದಿಗೆ ಭೇಟಿ ಕೊಟ್ಟು ಮಾಹಿತಿ ಸಂಗ್ರಹ ಬಗ್ಗೆ ಸಂಪೂರ್ಣ ವರದಿ ನೀಡಿದ್ದಾರೆ.
ತಾಲಿಬ್ ಬೆಂಗಳೂರಿನಲ್ಲಿದ್ದ ಅವಧಿಯಲ್ಲಿ ತಾಲಿಬ್ ನ ಚಟುವಟಿಕೆ ಬಗ್ಗೆ ವರದಿ ಪಡೆದುಕೊಂಡ ನಗರ ಪೊಲೀಸ್ ಆಯುಕ್ತರು ನಗರದ ಸೂಕ್ಷ್ಮ, ಅತಿಸೂಕ್ಷ್ಮ ಹಾಗೂ ಹೊರವಲಯದಲ್ಲಿ ನಿಗಾವಹಿಸುವಂತೆ ನಗರ ಭಯೋತ್ಪಾದನ ನಿಗ್ರಹ ದಳಕ್ಕೆ ಸೂಚನೆ ನೀಡಲಾಗಿದೆ.
ಹಿಜ್ಬುಲ್ ಮುಜಾಹಿದ್ದಿನ್ ಸಂಘಟನೆಯ ಕಮಾಂಡರ್ ಆಗಿದ್ದ ತಾಲೀಬ್ ಕಾಶ್ಮೀರದಿಂದ ಬಂದು ನಗರದ ಹಲವೆಡೆ ಸಭೆ ನಡೆಸಿರುವ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಕಾಶ್ಮೀರವನ್ನ ಪಾಕಿಸ್ತಾನಕ್ಕೆ ಸೇರಿಸಲು ಹೋರಾಟ ಮಾಡುತ್ತಿರುವ ಹಿಜ್ಬುಲ್ ಮುಜಾಹಿದ್ದಿನ್ ಸಂಘಟನೆ ಕೂಡ ಒಂದಾಗಿದ್ದು ಇದರಲ್ಲಿ ಪ್ರಮುಖ ಪಾತ್ರವನ್ನ ಉಗ್ರ ತಾಲೀಬ್ ಹುಸೇನ್ ವಹಿಸಿದ್ದ.
ನಗರಕ್ಕೆ ಬರುವುದಕ್ಕೆ ಮುಜಾಹಿದ್ದಿನ್ ನ ಕೆಲ ನಾಯಕರನ್ನು ರಕ್ಷಣಾ ಪಡೆ ಎನ್ಕೌಂಟರ್ ಮಾಡಿತ್ತು. ಇದ್ರಿಂದ ಭಯಗೊಂಡಿದ್ದ ತಾಲೀಬ್ ಕಾಶ್ಮೀರ ಬಿಟ್ಟು ಬೆಂಗಳೂರಲ್ಲಿ ತಲೆಮರೆಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ. 2016ರಲ್ಲಿ ಉಗ್ರರಾದ ಸಬ್ಜರ್ ಭಟ್, 2017ರಲ್ಲಿ ಬುರ್ಹಾನ್ ಮುಝಾಫರ್ ವನಿ, 2020ರಲ್ಲಿ ರಿಯಾಜ್ ನಾಯ್ಕೋ ಹಾಗೂ ಘಾಜಿ ಹೈದರ್ ಭಾರತೀಯ ಸೇನೆ ಹತ್ಯೆ ಮಾಡಿತ್ತು. ಹತ್ಯೆಯಾದ ನಾಲ್ವರು ಹಿಜ್ಬುಲ್ ಮುಜಾಹಿದ್ದಿನ್ ನ ಪ್ರಮುಖ ನಾಯಕರಾಗಿದ್ದರು. ಇವರೆಲ್ಲ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಬೇಕೆಂದು ಹೋರಾಟ ಮಾಡುತ್ತಿದ್ದರು.ಇದೇ ಸಂಘಟನೆಯಲ್ಲಿ ಪ್ರಮುಖ ನಿರ್ಧಾರಗಳನ್ನ ತೆಗೆದುಕೊಳ್ಳುವವರಲ್ಲಿ ತಾಲೀಬ್ ಹುಸೇನ್ ಮುಂಚೂಣಿಯಲ್ಲಿದ್ದ. ಇಲ್ಲಿಯೇ ಇದ್ದುಕೊಂಡು ಸಾಮಾನ್ಯನಂತೆ ಜೀವನ ನಡೆಸುವುದರ ಜೊತೆಗೆ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ.
PublicNext
13/06/2022 09:12 pm