ದಾವಣಗೆರೆ: ತಾಲೂಕಿನ ಅತ್ತಿಗೆರೆ ಗ್ರಾಮದಲ್ಲಿ ಯುವತಿಗೆ ಅಶ್ಲೀಲ ಸಂದೇಶ ಮಾಡುತ್ತಿದ್ದಲ್ಲದೇ, ಫೇಸ್ ಬುಕ್ ನಲ್ಲಿ ಫೋಟೋ ಹಾಕಿದ ಎಂಬ ಕಾರಣಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.
ಅತ್ತಿಗೆರೆ ಗ್ರಾಮದ ಗಣೇಶ ಎಂಬಾತ ಅದೇ ಗ್ರಾಮದ ಯುವತಿಯೊಬ್ಬಳಿಗೆ ಇನ್ಟಾಗ್ರಾಂನಲ್ಲಿ ಹಾಯ್ ಎಂಬ ಮೆಸೇಜ್ ಹಾಕಿದ್ದ. ನಂತರ ಯುವತಿಗೆ ಪದೇ ಪದೇ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ. ಮಾತ್ರವಲ್ಲ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಯುವತಿ ಕುಟುಂಬಸ್ಥರು ಗಣೇಶ್ ನನ್ನು ಪ್ರಶ್ನಿಸಿದ್ದಾರೆ. ಯಾಕೆ ಫೋಟೋವನ್ನು ಫೇಸ್ ಬುಕ್ ನಲ್ಲಿ ಹಾಕಿದ್ದೀಯಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಯುವತಿಗೆ ಮೆಸೇಜ್ ಕಳುಹಿಸುವ ಮೂಲಕ ಪೀಡಿಸುತ್ತಿದ್ದ. ವ್ಯಾಟ್ಸಪ್ ನಲ್ಲಿ ಮೆಸೇಜ್ ಹಾಕುವುದು, ಯುವತಿಯ ಬಗ್ಗೆ ಕವನ ಬರೆಯುವುದು ಸೇರಿದಂತೆ ಚೇಷ್ಟೆ ಮುಂದುವರಿಸಿದ್ದ. ಈ ವಿಷಯ ಗೊತ್ತಾಗುತ್ತಿದ್ದಂತೆ ಯುವತಿಯ ಪಾಲಕರು ಹಾಗೂ ಜನರು ಧರ್ಮದೇಟು ನೀಡಿದ್ದಾರೆ. ಅಷ್ಟೇ ಅಲ್ಲ, ಈ ವೇಳೆ ತಪ್ಪಿಸಿಕೊಳ್ಳಲು ಮೊದಲ ಮಹಡಿಯಿಂದ ಕೆಳಗೆ ಹಾರಿದ್ದಾನೆ. ಆತನನ್ನು ಹಿಡಿದು ಮತ್ತೆ ಈ ರೀತಿಯ ವರ್ತನೆ ಮಾಡಬಾರದು ಎಂದು ಗ್ರಾಮದ ದೇವಸ್ಥಾನದ ಬಳಿಯ ಕಂಬಕ್ಕೆ ಕಟ್ಟಿ ಹಾಕಿ ಗ್ರಾಮಸ್ಥರು ಗೂಸಾ ನೀಡಿದ್ದಾರೆ.
ಬಳಿಕ ಅರಬೆತ್ತಲೆ ಮಾಡಿ ಮೆರವಣಿಗೆ ಮಾಡಿ ದಂಡಿಸಿದ್ದಾರೆ. ನಂತರ ಗಣೇಶ್ ಗೆ ಬುದ್ದಿ ಹೇಳಿ ಕಳುಹಿಸಿದ್ದಾರೆ. ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಳೆದ ನಾಲ್ಕು ದಿನಗಳ ಹಿಂದೆ ಹಲ್ಲೆ ಮಾಡಿದ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
PublicNext
15/05/2022 03:48 pm