ಮಂಡ್ಯ: ಕಲಬುರ್ಗಿ, ಬೆಂಗಳೂರು, ಹಾಸನದ ಬಳಿಕ, ಈಗ 545 ಪಿಎಸ್ಐ ನೇಮಕಾತಿ ಅಕ್ರಮದ ಘಾಟು ಸಕ್ಕರೆ ನಾಡು ಮಂಡ್ಯಕ್ಕೂ ಕಾಲಿಟ್ಟಿದೆ. ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ, ನಾಗಮಂಗಲ ಮೂಲಕ ಯುವ ಕಾಂಗ್ರೆಸ್ ಮುಖಂಡನನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿರೋದಾಗಿ ತಿಳಿದು ಬಂದಿದೆ.
ಈಗಾಗಲೇ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಹಲವರನ್ನು ಬಂಧಿಸಿ, ಜೈಲಿಗಟ್ಟಿರುವಂತ ಸಿಐಡಿ ಅಧಿಕಾರಿಗಳು, ನಿನ್ನೆಯಷ್ಟೇ ನೇಮಕಾತಿ ವಿಭಾಗಕ್ಕೂ ಲಗ್ಗೆ ಇಟ್ಟಿದ್ದರು. ನಾಲ್ವರು ಅಧಿಕಾರಿಗಳು ಹಾಗೂ ಇಬ್ಬರು ಮಧ್ಯವರ್ತಿಗಳ ಸಹಿತ ಆರು ಮಂದಿಯನ್ನು ಬಂಧಿಸಿದ್ದರು.
ಇದೀಗ ಮಂಡ್ಯಕ್ಕೂ ಪಿಎಸ್ಐ ಅಕ್ರಮದ ಘಾಟು ಕಾಲಿಟ್ಟಿದೆ. ಪಿಎಸ್ಐ ಅಕ್ರಮದಲ್ಲಿ ಯುವ ರಾಜಕಾರಣಿಯ ‘ಕೈ’ವಾಡದ ಶಂಕೆಯ ಹಿನ್ನಲೆಯಲ್ಲಿ, ನಾಗಮಂಗಲ ಮೂಲದ ಯುವ ಕಾಂಗ್ರೆಸ್ಸಿಗ ಶರತ್ ರಾಮಣ್ಣ ಎಂಬುವರನ್ನು ಸಿಐಡಿ ವಶಕ್ಕೆ ಪಡೆದಿದೆ ಎನ್ನಲಾಗಿದೆ.
ಪ್ರಭಾವಿ ಯುವ ಕಾಂಗ್ರೆಸ್ ಮುಖಂಡ ಆಗಿರುವಂತ ಶರತ್ ರಾಮಣ್ಣ, ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಆಪ್ತ ಹಾಗೂ ನಾಗಮಂಗಲ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. PSI ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯ ಹಿನ್ನಲೆಯಲ್ಲಿ ಸಿಐಡಿ ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಆ ಬಗ್ಗೆ ಹೆಚ್ಚಿನ ಖಚಿತ ಮಾಹಿತಿ ಲಭ್ಯವಾಗಬೇಕಿದೆ.
PublicNext
11/05/2022 09:27 am