ಹೈದರಾಬಾದ್: ಅಮೆರಿಕದಲ್ಲಿರುವ ಮಗಳನ್ನು ಭೇಟಿಯಾಗಿ ವಾಪಸ್ ಬಂದ ದಿನವೇ ದಂಪತಿಯ ಕೊಲೆಯಾಗಿದೆ. ಆಂಧ್ರಪ್ರದೇಶದ ಮೈಲಾಪುರದಲ್ಲಿ ಈ ಘಟನೆ ನಡೆದಿದೆ. ದಂಪತಿಯ ಕಾರು ಚಾಲಕ ಹಾಗೂ ಮನೆಯ ಸಹಾಯಕರು ಸೇರಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಮೈಲಾಪುರದ ದ್ವಾರಕಾ ಕಾಲೊನಿ ನಿವಾಸಿಗಳಾದ ಶ್ರೀಕಾಂತ್(58) ಹಾಗೂ ಅನುರಾಧ (53) ಎಂಬ ದಂಪತಿ ಕೊಲೆಯಾಗಿದ್ದಾರೆ. ಶ್ರೀಕಾಂತ್ ಗುಜರಾತ್‌ನಲ್ಲಿ ಸಾಫ್ಟ್‌ವೇರ್ ಕಂಪನಿಯೊಂದನ್ನು ನಡೆಸುತ್ತಿದ್ದರು. ಹತ್ತು ತಿಂಗಳ ಹಿಂದೆ ತಮ್ಮ ಮಗಳನ್ನು ನೋಡಲು ಪತ್ನಿ ಸಮೇತ ಅಮೆರಿಕಕ್ಕೆ ಹೋಗಿದ್ದ ಶ್ರೀಕಾಂತ್, ಕಳೆದ ಶನಿವಾರವಷ್ಟೇ ವಾಪಸ್ ಬಂದಿದ್ದರು. ಶನಿವಾರ ಬೆಳಿಗ್ಗೆ 3-30ಕ್ಕೆ ದಂಪತಿಯನ್ನು ಏರ್‌ಪೋರ್ಟ್‌ನಿಂದ ಕಾರಿನಲ್ಲಿ ಕರೆದುಕೊಂಡು ಬಂದಿದ್ದ ಚಾಲಕ ಮನೆಗೆ ಹೋಗದೇ ನೆಮಿಲಿಚೇರಿಯಲ್ಲಿರುವ ಫಾರ್ಮ್ ಹೌಸ್‌ಗೆ ಕರೆದೊಯ್ದಿದ್ದಾನೆ. ಅಲ್ಲಿಗೆ ಮನೆಯಲ್ಲಿ ಕೆಲಸಕ್ಕಿದ್ದ ನೇಪಾಳಿ ಕೆಲಸಗಾರರನ್ನು ಕರೆಸಿಕೊಂಡಿದ್ದಾನೆ. ಎಲ್ಲರೂ ಸೇರಿ ದಂಪತಿಯನ್ನು ಕೊಲೆ ಮಾಡಿ ತೋಟದಲ್ಲಿ ಹೂತು ಹಾಕಿದ್ದರು. ರಕ್ತದ ಕಲೆಗಳನ್ನು ಒರೆಸಿ ಯಾವುದೇ ಸಾಕ್ಷ್ಯ ಸಿಗದಂತೆ ಮಾಡಿದ್ದರು.
ಇತ್ತ ಅಮೆರಿಕದಲ್ಲಿನ ಮಗಳು ಪೋಷಕರಿಗೆ ಕರೆ ಮಾಡಿದ್ದಾಳೆ. ಆದ್ರೆ ನಂಬರ್ ನಿರಂತರವಾಗಿ ಸ್ವಿಚ್ ಆಫ್ ಬಂದಾಗ ಪಕ್ಕದ ಮನೆಯವರಿಗೆ ಕರೆ ಮಾಡಿದ್ದಾರೆ. ಪಕ್ಕದ ಮನೆಯವರು ಬಂದು ನೋಡಿದಾಗ ಶ್ರೀಕಾಂತ್- ಅನುರಾಧ ದಂಪತಿ ಮನೆಯಲ್ಲೂ ಸಿಗದಾಗ ಅನುಮಾನ ಬಂದು ಪೊಲೀಸ್‌ಗೆ ದೂರು ನೀಡಿದ್ದಾರೆ. ಆಗ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮನೆ ಪರಿಶೀಲನೆ ನಡೆಸಿದಾಗ ಬೀರು ಒಡೆದು ಕಳ್ಳತನ ನಡೆಸಿರುವುದು ಗೊತ್ತಾಗಿದೆ. ಚಾಲಕ ಕೃಷ್ಣ ಮತ್ತು ಆತನ ಸಹಚರ ರವಿ ಎಂಬಾತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನೆಯಲ್ಲಿನ ಚಿನ್ನಾಭರಣ ಕದಿಯೋದಿಕ್ಕಾಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೂತಿಟ್ಟ ಶವ ತೆಗೆಸಿ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.
PublicNext
09/05/2022 11:36 am