ಲಕ್ನೋ: ನಾಲ್ವರು ಕಾಮುಕರಿಂದ ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯೊಬ್ಬಳು ಪೊಲೀಸ್ ಠಾಣೆಗೆ ದೂರು ನೀಡಲು ಬಂದಾಗ ಆಕೆಯ ಮೇಲೆ ಠಾಣೆಯ ಇನ್ಸ್‌ಪೆಕ್ಟರ್ ಅತ್ಯಾಚಾರವೆಸಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿತ್ತು. ಸದ್ಯ ಆರೋಪಿ ಇನ್ಸ್‌ಪೆಕ್ಟರ್‌ನನ್ನು ಬಂಧಿಸಲಾಗಿದೆ.
ಉತ್ತರ ಪ್ರದೇಶದ ಲಲಿತ್ಪುರದಲ್ಲಿ ಈ ಘಟನೆ ನಡೆದಿದೆ. ಲಲಿತ್‌ಪುರದ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ತಿಲಕಧಾರಿ ಸರೋಜ್‌ನನ್ನು ಪ್ರಯಾಗ್‌ರಾಜ್‌ನಿಂದ ಬಂಧಿಸಲಾಗಿದೆ. ಇದನ್ನು ಎಡಿಜಿ ಪ್ರಯಾಗ್‌ರಾಜ್ ಪ್ರೇಮ್ ಪ್ರಕಾಶ್ ಖಚಿತಪಡಿಸಿದ್ದಾರೆ. ಪ್ರಕರಣ ಬಹಿರಂಗಗೊಂಡ ನಂತರ ಇನ್ಸ್‌ಪೆಕ್ಟರ್ ಪರಾರಿಯಾಗಿದ್ದ. ಪ್ರಯಾಗ್‌ರಾಜ್‌ನಲ್ಲಿರುವ ಇನ್ಸ್‌ಪೆಕ್ಟರ್ ಮೊಬೈಲ್ ಫೋನ್ ಟ್ರ್ಯಾಕ್ ಮಾಡುವ ಮೂಲಕ ಸ್ಥಳ ವಿಳಾಸವನ್ನು ಪಡೆದು ಅವರನ್ನು ಸೆರೆಹಿಡಿಯಲಾಗಿದೆ. ಬಂಧನವನ್ನು ತಪ್ಪಿಸಲು ಕಾನೂನು ಸಲಹೆಗಾಗಿ ಇನ್ಸ್‌ಪೆಕ್ಟರ್ ಪ್ರಯಾಗ್‌ರಾಜ್‌ಗೆ ಪರಾರಿಯಾಗಿದ್ದ ಎಂದು ಹೇಳಲಾಗುತ್ತಿದೆ.
ಏನಿದು ಪ್ರಕರಣ?:
ಲಲಿತ್‌ಪುರದ ಪಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತೆಯನ್ನ ಕಳೆದ ಏಪ್ರಿಲ್ 22ರಂದು ನಾಲ್ವರು ದುಷ್ಕರ್ಮಿಗಳು ಭೋಪಾಲ್ಗೆ ಕರೆದೊಯ್ದಿದ್ದಾರೆ. ಸತತ ಮೂರು ದಿನಗಳ ಕಾಲ ಬಾಲಕಿ ಮೇಲೆ ದುಷ್ಕೃತ್ಯ ನಡೆಸಲಾಗಿದೆ. ಇದಾದ ಬಳಿಕ ಪೊಲೀಸ್ ಠಾಣೆಯಲ್ಲಿ ಬಾಲಕಿಯನ್ನ ಬಿಟ್ಟು ಪರಾರಿಯಾಗಿದ್ದಾರೆ. ಅಲ್ಲಿ ಇನ್ಸ್‌ಪೆಕ್ಟರ್ (ಎಸ್ಹೆಚ್ಒ) ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದು ಬಂದಿದೆ.
PublicNext
05/05/2022 08:18 am