ಗಾಂಧಿನಗರ: ಪಾಪಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಇಡೀ ಕುಟುಂಬವನ್ನೇ ಕೊಲೆಗೈದ ಅಮಾನವೀಯ ಘಟನೆ ಗುಜರಾತ್‌ನ ಅಹಮದಾಬಾದ್‌ನ ವಿರಾಟ್ ನಗರದಲ್ಲಿ ನಡೆದಿದೆ.
ಆಟೋ ಚಾಲಕನಾಗಿರುವ ಆರೋಪಿ ವಿನೋದ್ ಗಾಯಕ್ವಾಡ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪಾಪಿಯು ಮಾರ್ಚ್ 29ರಂದು ತನ್ನ ಪತ್ನಿ, ಇಬ್ಬರು ಮಕ್ಕಳು ಮತ್ತು ಪತ್ನಿಯ ಅಜ್ಜಿಯನ್ನು ಕೊಲೆಗೈದಿದ್ದ. ಅಷ್ಟೇ ಅಲ್ಲದೆ ಪ್ರಕರಣ ಮುಚ್ಚಿ ಹಾಕಲು ಪತ್ನಿಯ ತಾಯಿಯ ಹತ್ಯೆಗೂ ಯತ್ನಿಸಿದ್ದ.
ಆರೋಪಿ ವಿನೋದ್ ಗಾಯಕ್ವಾಡ್ ತನ್ನ ಪತ್ನಿ ಕಾರ್ಖಾನೆಯೊಂದರಲ್ಲಿ ತನ್ನ ಬಾಸ್ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಮಾರ್ಚ್ 29ರಂದು ಮಕ್ಕಳು ಮಾರುಕಟ್ಟೆ ಹೋಗಿದ್ದಾಗ ವಿನೋದ್ ಪತ್ನಿಯ ಜೊತೆಗೆ ಜಗಳ ಆರಂಭಿಸಿದ್ದ. ಬಳಿಕ ಆಕೆಯನ್ನು ರೂಮ್‌ಗೆ ಕರೆದೊಯ್ದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಪತ್ನಿಯ ಅಜ್ಜಿಯ ಮೇಲೆ ಹಲ್ಲೆ ಮಾಡಿ ಆಕೆಯನ್ನು ಸಹ ಕೊಲೆಗೈದಿದ್ದಾನೆ.
ಇದೇ ವೇಳೆ ಮಾರುಕಟ್ಟೆಯಿಂದ ವಾಪಾಸ್ ಬಂದ ಮಕ್ಕಳ ಮೇಲೂ ಚಾಕುವಿನಿಂದ ದಾಳಿ ನಡೆಸಿದ ಕ್ರೂರಿ ಅವರನ್ನೂ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಪತ್ನಿಯ ತಾಯಿ (ಅತ್ತೆ) ಮೇಲೆ ವಿನೋದ್ ಹಲ್ಲೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಅವರು ಪಾಪಿಯ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ.
ತನ್ನ ಕೃತ್ಯದಿಂದ ಭಯಕ್ಕೆ ಒಳಗಾದ ಆರೋಪಿ ವಿನೋದ್ ಮಧ್ಯಪ್ರದೇಶ-ಗುಜರಾತ್ ಗಡಿಯ ದಾಹೋಡ್‌ಗೆ ಪರಾರಿಯಾಗಿದ್ದ. ಆತನನ್ನು ಪೊಲೀಸರು ಗುರುವಾರ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
PublicNext
01/04/2022 04:26 pm