ಲಕ್ನೋ: ಮಿಠಾಯಿ ತಿಂದು ಒಂದೇ ಕುಟುಂಬದ ಮೂವರು ಸೇರಿ ಒಟ್ಟು ನಾಲ್ಕು ಮಕ್ಕಳು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಕುಶಿನಗರದ ಕಸಾಯ ಪೊಲೀಸ್ ಠಾಣಾ ವ್ಯಾಪ್ತಿಯ ಸಿಸಾಯಿ ಗ್ರಾಮದ ಲಾತೂರ್ ತೋಲಾ ಎಂಬಲ್ಲಿ ನಡೆದಿದೆ.
ಲಾತೂರ್ ತೋಲಾ ನಿವಾಸಿ ರಸಗುಲ್ ಎಂಬವರ ಮೂವರು ಮಕ್ಕಳಾದ ಮಂಜನಾ (7), ಸ್ವೀಟಿ (5), ಸಮರ್ (3) ಮತ್ತು ಅವರ ಸಹೋದರಿ ಖುಷ್ಬೂ ಅವರ ಮಗ ಆಯುಷ್ (5) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಕೆಲ ದುಷ್ಕರ್ಮಿಗಳು ಮನೆ ಬಾಗಿಲಿಗೆ ಮಿಠಾಯಿ ಎಸೆದಿದ್ದರು. ನನ್ನ ದೊಡ್ಡ ಮಗಳು ಆ ಮಿಠಾಯಿ ನೋಡಿದ್ದಳು. ಬಳಿಕ ಮಿಠಾಯಿಯನ್ನು ನಾಲ್ವರು ಹಂಚಿಕೊಂಡು ತಿಂದಿದ್ದಾರೆ. ತಿಂದ ಕೆಲವೇ ಕ್ಷಣಗಳಲ್ಲಿ ಅವರ ಆರೋಗ್ಯ ಹದಗೆಡಲು ಪ್ರಾರಂಭಿಸಿತು. ಕೂಡಲೇ ಅವರೆಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಮೃತ ಮಕ್ಕಳ ತಂದೆ ರಸಗುಲ್ ಕಣ್ಣೀರಿಟ್ಟಿದ್ದಾರೆ.
ಮಕ್ಕಳ ಸಾವನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಮೃತ ಮಕ್ಕಳ ಶವಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.
PublicNext
23/03/2022 03:33 pm