ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಕೆಆರ್ಎಸ್ ಗ್ರಾಮದಲ್ಲಿ ಫೆಬ್ರವರಿ 6ರಂದು ನಡೆದ ಐವರ ಕೊಲೆ ಪ್ರಕರಣವು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೊಲೆ ರಹಸ್ಯ ಬಯಲಿಗೆ ತಂದಿದ್ದಾರೆ.
ಗಂಗಾರಾಮ್ ಎಂಬುವರ ಪತ್ನಿ ಲಕ್ಷ್ಮೀ (26), ರಾಜ್ (13), ಕೋಮಲ್ (7), ಕುನಾಲ್ (4), ಗೋವಿಂದ್ (8) ಎಂಬುವವರನ್ನ ಮಾರಕಾಸ್ತ್ರಗಳಿಂದ ಹೊಡೆದು ಭೀಕರವಾಗಿ ಹತ್ಯೆಗೈಯಲ್ಲಾಗಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ, ಕೆಆರ್ಎಸ್ ಗ್ರಾಮ ಮಾತ್ರವಲ್ಲ, ಇಡೀ ರಾಜ್ಯವೇ ಒಂದು ಸಲ ಬೆಚ್ಚಿಬಿದ್ದಿತ್ತು.
ಆರೋಪಿ ಲಕ್ಷ್ಮಿ (30) ಹಾಗೂ ಕೊಲೆಯಾದ ಲಕ್ಷ್ಮಿ (26) ಗಂಡ ಗಂಗಾರಾಮ್ ಜತೆ ವಿವಾಹೇತರ ಸಂಬಂಧ ಹೊಂದಿದ್ದಳು. ಮದುವೆಯಾಗಿ ಎರಡು ಮಕ್ಕಳ ತಾಯಿಯಾದ್ರೂ ಪರ ಪುರುಷನ ಮೇಲೆ ಆಕೆಗೆ ಮನಸ್ಸಾಗಿತ್ತು. ಆರು ತಿಂಗಳಿಂದ ಗಂಗಾರಾಮ್ ಜೊತೆ ಅಕ್ರಮ ಸಂಬಂಧವನ್ನು ಆರೋಪಿ ಇಟ್ಟುಕೊಂಡಿದ್ದಳು ಎಂದು ತಿಳಿದು ಬಂದಿದೆ.
ಪತ್ನಿ ಲಕ್ಷ್ಮಿಗೆ ಈ ವಿಚಾರ ತಿಳಿದ ನಂತರ ಗಂಗಾರಾಮ್ ಅಕ್ರಮ ಸಂಬಂಧವನ್ನು ಬಿಟ್ಟಿದ್ದ. ಆದರೆ ಲಕ್ಷ್ಮಿಯನ್ನು ಬಿಟ್ಟು ತನ್ನನ್ನು ಮದುವೆಯಾಗು ಅಂತ ಗಂಗಾರಾಮ್ನನ್ನು ಆರೋಪಿ ಪೀಡಿಸುತ್ತಿದ್ದಳು. ಇದೀಗ ತನ್ನ ಅಕ್ರಮ ಸಂಬಂಧ ಉಳಿಸಿಕೊಳ್ಳಲು ಅಮಾಯಕ ಜೀವಗಳನ್ನೇ ಇದೀಗ ಬಲಿ ಪಡೆದಿದ್ದಾಳೆ.
ಪೊಲೀಸರ ಲಾಠಿ ಏಟಿಗೆ ಬೆದರಿದ ಆರೋಪಿ ಲಕ್ಷ್ಮೀ, ಫೆಬ್ರವರಿ 5ರ ಮಧ್ಯರಾತ್ರಿ ಕೃತ್ಯ ಹೇಗೆ ಮಾಡಿದೆ ಅನ್ನೋದನ್ನ ಬಾಯಿಬಿಟ್ಟಿದ್ದಾಳಂತೆ. ಅದರ ಪ್ರಕಾರ, ‘ನನಗೆ ಗಾಂಗಾರಾಮ್ ಮೇಲೆ ಕ್ರಷ್ ಆಗಿತ್ತು. ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತು. ಆದರೆ, ಅದಕ್ಕೆ ಗಂಗಾರಾಮ್ ಪತ್ನಿ ಲಕ್ಷ್ಮೀ ಅಡ್ಡ ಬರುತ್ತಿದ್ದಳು. ಹೀಗಾಗಿ ನಾನು ಒಂದು ನಿರ್ಧಾರಕ್ಕೆ ಬಂದೆ. ಅದರಂತೆ, ಫೆಬ್ರವರಿ 5 ರಂದು ರಾತ್ರಿ, ನಾನು ಗಂಗಾರಾಮ್ ಮನೆಗೆ ಬಂದಿದ್ದೆ. ನಾನು ಬರುತ್ತಿದ್ದಂತೆಯೇ ಲಕ್ಷ್ಮೀ ನನ್ನನ್ನ ಉಪಚಾರ ಮಾಡಿದ್ದಾಳೆ. ರಾತ್ರಿ ಲಕ್ಷ್ಮೀ ಹಾಗೂ ಅವರ ಮನೆಯಲ್ಲಿದ್ದ ನಾಲ್ವರು ಗಂಡು ಮಕ್ಕಳೊಂದಿಗೆ ಊಟ ಮಾಡಿ ಮಲಗಿದ್ವಿ. ಅದು 12 ಗಂಟೆಯಿಂದ 1 ಗಂಟೆಯ ಸುಮಾರಿಗೆ ನಾನು ಎದ್ದು, ಬ್ಯಾಗ್ನಲ್ಲಿಟ್ಟಿದ್ದ ಮಚ್ಚನ್ನ ತೆಗೆದು ಲಕ್ಷ್ಮೀಯನ್ನ ಕೊಲೆ ಮಾಡಿದೆ. ಈ ವೇಳೆ ನಿದ್ರೆಗೆ ಜಾರಿದ್ದ ಹುಡುಗರಿಗೆ ಎಚ್ಚರವಾಗಿದೆ. ಅವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಬೇಕಾಯಿತು ಅಂತ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದಾಳಂತೆ.
ಆರೋಪಿ ಲಕ್ಷ್ಮಿ ಹತ್ಯೆ ನಂತರ ಮುಂಜಾನೆವರೆಗೂ ಅಲ್ಲೇ ಇದ್ದು ಬೆಳಗಿನ ಜಾವ ಮೈಸೂರಿನ ಮನೆಗೆ ವಾಪಾಸ್ ಆಗಿದ್ದಾಳೆ. ಬಳಿಕ ರಕ್ತದ ಬಟ್ಟೆಯನ್ನು ವರುಣ ನಾಲೆಗೆ ಎಸೆದಿದ್ದಾಳೆ. ಮತ್ತೆ ಬೆಳಗ್ಗೆ 7 ಗಂಟೆ ಸುಮಾರಿಗೆ ಹತ್ಯೆ ನಡೆದ ಸ್ಥಳಕ್ಕೆ ಬಂದು ಎಲ್ಲರ ಜೊತೆ ಸೇರಿ ಅಳುವ ನಾಟಕವಾಡಿ ಡ್ರಾಮ ಮಾಡಿದ್ದಾಳೆ.ಒಂದೇ ದಿನ ಐವರು ಕೊಲೆಯಾಗಿದ್ದನ್ನು ನೋಡಿ ಮಂಡ್ಯ ಜನತೆಯೇ ಬೆಚ್ಚಿಬಿದ್ದಿತು. ಪೊಲೀಸರಿಗೂ ಇದು ಬಾರಿ ತಲೆ ನೋವಾಗಿತ್ತು. ಇದೀಗ ಪ್ರಕರಣದ ಸತ್ಯಾಂಶ ತಿಳಿದ ಪೊಲೀಸರು ಕೂಡ ಶಾಕ್ ಆಗಿದ್ದಾರೆ.
PublicNext
09/02/2022 06:07 pm