ಬೆಳಗಾವಿ: ಗ್ರಾಮ ಪಂಚಾಯತಿ ಅಕ್ರಮ ಬಯಲಿಗೆಳೆದ ವ್ಯಕ್ತಿಯ ಮೇಲೆ ಅಧ್ಯಕ್ಷ ಹಾಗೂ ಬೆಂಬಲಿತ ಸದಸ್ಯರು ಸೇರಿ ಸಭೆಯಲ್ಲೇ ಹಲ್ಲೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹೂಲಿ ಗ್ರಾಮ ಪಂಚಾಯತಿಯಲ್ಲಿ ಘಟನೆ ನಡೆದಿದೆ.
ಸಂಗಪ್ಪ ಗೂಡಗಾರ್ ಎಂಬ ವ್ಯಕ್ತಿಯ ಮೇಲೆ ಗ್ರಾಮ ಪಂಚಾಯತಿ ಅಧ್ಯಕ್ಷ ವಿರೂಪಾಕ್ಷ ತೊರಗಲ್ ಹಾಗೂ ಅವರ ಬೆಂಬಲಿಗ ಸದಸ್ಯರು ಸಂಗಪ್ಪ ಗೂಡಗಾರ್ ಎಂಬಾತರ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಲಭ್ಯವಾಗಿದೆ.
2020-21ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮ ನಡೆದಿತ್ತು ಎನ್ನಲಾಗಿದೆ. ಇದರಲ್ಲಿ ಅಧ್ಯಕ್ಷ ವಿರೂಪಾಕ್ಷ ತೊರಗಲ್ ಹಾಗೂ ಪಿಡಿಓ ಫಕ್ಕಿರವ್ವ ಹನಸಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪ ಇದೆ. ಅಕ್ರಮದ ಬಗ್ಗೆ ಜಿ.ಪಂ ಸಿಇಓ ಅವರಿಗೆ ಸಂಗಪ್ಪ ಗೂಡಗಾರ್ ಅವರು ಮನವಿ ಮಾಡಿದ್ದರು. ಹೀಗಾಗಿ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ತಾಲೂಕು ಪಂಚಾಯತಿಗೆ ಸಿಇಓ ಆದೇಶ ಮಾಡಿದ್ದರು.
ಈ ಆದೇಶದ ಹಿನ್ನೆಲೆಯಲ್ಲಿ ನಿನ್ನೆ ತಾಲೂಕು ಪಂಚಾಯತಿ AD ಆಗಿರುವ ಸಂಗನೌಡ ಹಂದ್ರಾಳ ನೇತೃತ್ವದಲ್ಲಿ ತನಿಖೆಯೂ ಆರಂಭವಾಗಿತ್ತು. ಇದರಿಂದ ಆಕ್ರೋಶಗೊಂಡ ಅಧ್ಯಕ್ಷ ವಿರೂಪಾಕ್ಷ ಹಾಗೂ ಬೆಂಬಲಿಗರು ಸಂಗಪ್ಪನ ಮೇಲೆ ಹಲ್ಲೆ ಮಾಡಿದ್ದಾರೆ.
PublicNext
04/01/2022 05:29 pm