ವರದಿ: ರಹೀಂ ಉಜಿರೆ
ಹೆಬ್ರಿ: ಉಡುಪಿ ಜಿಲ್ಲೆಯ ಹೆಬ್ರಿ ಪಾಲಿಗೆ ಇವತ್ತು ಕರಾಳ ಶುಕ್ರವಾರ. ಊರಿನ ಮೂವರು ವಿದ್ಯಾರ್ಥಿಗಳು ಕಾಲೇಜಿಗೆಂದು ಹೋಗಿ, ಹೊಳೆಗೆ ಈಜಲು ಇಳಿದು ದುರಂತ ಸಾವು ತಂದುಕೊಂಡಿದ್ದಾರೆ. ಹೆಬ್ರಿ ಮತ್ತು ಹಿರಿಯಡ್ಕದಲ್ಲಿ ಶೋಕ ಮಡುಗಟ್ಟಿದೆ.
ಹದಿಹರೆಯದ ಮಕ್ಕಳಿಗೆ ಆಟ; ಹೆತ್ತವರಿಗೆ ಜೀವ ಸಂಕಟ! ಹೌದು. ಇವತ್ತಿನ ಶುಕ್ರವಾರ ಹೆಬ್ರಿ ಪಾಲಿಗೆ ದುರದೃಷ್ಟದ ದಿನ.
ಹೆಬ್ರಿ ತಾಲೂಕಿನ ಶಿವಪುರ ಗ್ರಾಪಂ ವ್ಯಾಪ್ತಿಯಲ್ಲಿ ದೊಡ್ಡ ದುರಂತವೇ ನಡೆದು ಹೋಗಿದೆ! ಕಾಲೇಜಿಗೆಂದು ತಂದೆ- ತಾಯಿ ಜತೆ ಹೇಳಿ ಹೊರಟ ಮಕ್ಕಳು, ಕಾಲೇಜು ತಪ್ಪಿಸಿ, ಹೊಳೆಗೆ ಈಜಲು ಹೋಗಿ ಸಾವನ್ನಪ್ಪಿದ್ದಾರೆ.
ಹೆಬ್ರಿಯ ಮುಳ್ಳುಗುಡ್ಡೆ ಸಮೀಪದ ಭಟ್ರಾಡಿ ಹೊಳೆಗೆ ಈಜಲು ಹೋದ ಮಕ್ಕಳು ಸಮೀಪದ ಹಿರಿಯಡ್ಕ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು. ಎಂಟು ಹುಡುಗರು ಗುಂಪು ಕಟ್ಟಿಕೊಂಡು ಈಜಲು ಹೋಗಿದ್ದಾರೆ. ಈ ಪೈಕಿ ಮೂವರು ನೀರಲ್ಲಿ ಮುಳುಗಿ ಬಾರದ ಲೋಕಕ್ಕೆ ತೆರಳಿದ್ದಾರೆ. ಸುದರ್ಶನ್ (16), ಸೋನಿತ್ (17) ಹಾಗೂ ಕಿರಣ್ 16 ನತದೃಷ್ಟರು.
ಇದೇ ಕಾಲೇಜಿನ ಕೆಲವು ಹುಡುಗರು ನಿನ್ನೆಯೂ ಈ ಹೊಳೆಗೆ ಈಜಲು ಹೋಗಿದ್ದರಂತೆ. ಇವತ್ತು ಮತ್ತೆ ಹೋಗಿದ್ದಾರೆ. ಇಂದು ನೀರಲ್ಲಿ ಮುಳುಗಿದ ಮೂವರು ವಿದ್ಯಾರ್ಥಿಗಳು ನಿನ್ನೆ ನೀರಿಗಿಳಿದಿರಲಿಲ್ಲ. ಹೀಗಾಗಿ ಇವತ್ತು ಸ್ನಾನಕ್ಕೆ ಇಳಿದಿದ್ದಾರೆ. ಇಳಿದವರು ನೋಡನೋಡುತ್ತಲೇ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ವಿಷಯ ತಿಳಿದು ಇಡೀ ಗ್ರಾಮಸ್ಥರು ಮತ್ತು ಶಾಲೆಯ ಸಹಪಾಠಿಗಳು ಇಲ್ಲಿ ನೆರೆದಿದ್ದರು.
ಸ್ಥಳೀಯರ ಸಹಕಾರದಿಂದ ಮೃತದೇಹಗಳನ್ನು ಮೇಲಕ್ಕೆತ್ತುವಾಗ ಎಲ್ಲರ ಕಣ್ಣಂಚಲ್ಲೂ ನೀರಿತ್ತು.
PublicNext
26/11/2021 07:24 pm