ನೋಯ್ಡಾ: ಯುವಕನೋರ್ವ ಕಾರಿನ ದಾಖಲೆ ತೋರಿಸಲು ಕೇಳಿದ ಟ್ರಾಫಿಕ್ ಪೊಲೀಸ್ ಕಾನ್‌ಸ್ಟೇಬಲ್‌ನನ್ನು ಅಪಹರಿಸಿದ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರೇಟರ್ ನೋಯ್ಡಾದ ಘೋಡಿ ಬಾಚೇಡಾ ಗ್ರಾಮದ ನಿವಾಸಿ ಸಚಿನ್ ರಾವಲ್ (29) ಬಂಧಿತ ಆರೋಪಿ. ಎಲ್ಲಾ ವಾಹನಗಳ ದಾಖಲೆ ತಪಾಸಣೆ ನಡೆಸುತ್ತಿದ್ದಾಗ ಸಚಿನ್ ರಾವಲ್ ಕಾರ್ ಅನ್ನು ಟ್ರಾಫಿಕ್ ಪೊಲೀಸ್ ವೀರೇಂದ್ರ ಸಿಂಗ್ ತಡೆದು ನಿಲ್ಲಿಸಿದ್ದರು. ಅಲ್ಲದೇ ದಾಖಲೆ ತೋರಿಸುವಂತೆ ಕೇಳಿದ್ದರು. ಆಗ ರಾವಲ್ ಕಾರಿನೊಳಗೆ ಕುಳಿತುಕೊಳ್ಳುವಂತೆ ವೀರೇಂದ್ರ ಸಿಂಗ್‌ಗೆ ಹೇಳಿದ್ದ. ಈ ವೇಳೆ ಸಿಂಗ್ ದಾಖಲೆ ತೋರಿಸಲು ಒತ್ತಾಯಿಸಿದಾಗ, ದಿಢೀರನೆ ಕಾರಿನ ಬಾಗಿಲನ್ನು ಲಾಕ್ ಮಾಡಿ ಸುಮಾರು 10 ಕಿ.ಮೀ ದೂರದವರೆಗೆ ಕರೆದೊಯ್ದಿದ್ದ. ಬಳಿಕ ಟ್ರಾಫಿಕ್ ವೀರೇಂದ್ರ ಸಿಂಗ್ ಅವರನ್ನು ಅಜಯ್ ಪುರ್ ಪೊಲೀಸ್ ಚೌಕಿ ಬಳಿ ಬಲವಂತವಾಗಿ ಹೊರದಬ್ಬಿ ಪರಾರಿಯಾಗಿದ್ದ.
ಸಚಿನ್ ರಾವಲ್ ತನ್ನ ಕಾರಿಗೆ ನಕಲಿ ನಂಬರ್ ಅಳವಡಿಸಿಕೊಂಡು ಓಡಾಡುತ್ತಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಚಿನ್ ರಾವಲ್‌ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
PublicNext
19/10/2021 05:26 pm