ಬೆಂಗಳೂರು: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ 10ನೇ ಕ್ಲಾಸ್ ವಿದ್ಯಾರ್ಥಿಗಳು ಕೊನೆಗೂ ಪತ್ತೆಯಾಗಿದ್ದಾರೆ. ಇವರು ಪತ್ತೆಯಾಗಿದ್ದೇ ರೋಚಕ. ಪತ್ರ ಬರೆದಿಟ್ಟು ಮನೆ ತೊರೆದಿದ್ದ ಇವರು ಕ್ರೀಡೆಯಲ್ಲಿ ಸಾಧನೆ ಮಾಡೋದಾಗಿ ಹೊರಟಿದ್ದರು.
ನಮಗೆ ಓದಿನಲ್ಲಿ ಆಸಕ್ತಿ ಇಲ್ಲ. ನಮಗೆ ಓದು ಬೇಡ ಎಂದು ನಿರ್ಧರಿಸಿ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸೌಂದರ್ಯ ಶಾಲೆಯ ಕಿರಣ್, ಪರೀಕ್ಷಿತ್ ಹಾಗೂ ನಂದನ್ ಎಂಬುವವರು ಮನೆ ಬಿಟ್ಟು ಹೋಗಿದ್ದರು. ಹೋಗುವಾಗ ಮನೆಯಿಂದ ಹಣ ತೆಗೆದುಕೊಂಡು ಹೋಗಿದ್ದರು.
ಮಂಗಳೂರು ನಗರದಲ್ಲಿ ನಾವು ನಮ್ಮ ಭವಿಷ್ಯ ಕಟ್ಟಿಕೊಳ್ಳೋಣ ಎಂದು ನಿರ್ಧರಿಸಿದ್ದ ಇವರು ನಂತರ ಮೈಸೂರಿಗೆ ಹೋಗಿದ್ದಾರೆ. ಅಲ್ಲಿ ದಸರಾ ಸಂಭ್ರಮ ನೋಡಿಕೊಂಡು ಬೆಂಗಳೂರಿಗೆ ಬಂದಿದ್ದಾರೆ. ಅಷ್ಟೊತ್ತಿಗೆ ಕೈಯಲ್ಲಿದ್ದ ಹಣ ಖಾಲಿಯಾಗಿದೆ.
ಪತ್ತೆಯಾಗಿದ್ದು ಹೇಗೆ?
ಬೆಂಗಳೂರಿಗೆ ಬಂದಾಗ ಕೈ ಖಾಲಿ ಆಗಿದೆ. ಹೀಗಾಗಿ ಚಿಂದಿ ಆಯುವ ವ್ಯಕ್ತಿಯ ಬಳಿ ಓ ಹುಡುಗರು ಕೆಲಸ ಕೇಳಿಕೊಂಡು ಹೋಗಿದ್ದಾರೆ. ಇವರ ಧಿರಿಸು, ಮಾತಿನ ದಾಟಿ ಗಮನಿಸಿದ ಆ ವ್ಯಕ್ತಿ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಬಂದು ಈ ಹುಡುಗರನ್ನು ಠಾಣೆಗೆ ಕರೆದೊಯ್ದ ಪೊಲೀಸರು ವಿಚಾರಣೆ ನಡೆಸಿದಾಗ ಈ ಎಲ್ಲ ವಿಷಯ ಬೆಳಕಿಗೆ ಬಂದಿದೆ. ನಂತರ ಪೋಷಕರನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಮಕ್ಕಳಿಗೆ ಬುದ್ಧಿ ಹೇಳಿ ಪೋಷಕರೊಂದಿಗೆ ಕಳುಹಿಸಿದ್ದಾರೆ.
PublicNext
12/10/2021 03:31 pm