ದಾವಣಗೆರೆ: ಪೆಟ್ರೋಲ್ ಸುರಿದು ಕೊಟ್ಟಿಗೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ದುಬಾರಿ ಬೆಲೆಯ ಎಮ್ಮೆ ಮತ್ತು ಕೋಳಿಗಳು ಸುಟ್ಟು ಕರಕಲಾಗಿರುವ ಘಟನೆ ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ಹುಚ್ಚವ್ವನಹಳ್ಳಿ ವಡ್ಡರಹಟ್ಟಿಯಲ್ಲಿ ನಡೆದಿದೆ.
ರೈತ ಹನುಮಂತಪ್ಪ ಅವರ ಕೊಟ್ಟಿಗೆ ಇದಾಗಿದ್ದು, ಮುರ್ರಾ ತಳಿಯ ಒಂದು ಎಮ್ಮೆ ಮತ್ತು ಇಪ್ಪತ್ತಕ್ಕೂ ಹೆಚ್ಚು ಕೋಳಿಗಳು ಸಾವು ಕಂಡಿವೆ. ಇದರಿಂದಾಗಿ ರೈತ ಹನುಮಂತಪ್ಪ ಅವರಿಗೆ 1.80 ಲಕ್ಷ ರೂಪಾಯಿಗೂ ಅಧಿಕ ಹಾನಿ ಸಂಭವಿಸಿದೆ. ಈ ಘಟನೆಯಲ್ಲಿ ಮತ್ತೊಂದು ಎಮ್ಮೆ ಗಂಭೀರವಾಗಿ ಗಾಯಗೊಂಡಿದೆ.
ರೈತ ಹನುಮಂತಪ್ಪ ಅವರಿಗೆ ಸಮಾಜ ಕಲ್ಯಾಣ ಮತ್ತು ಪಶು ಸಂಗೋಪನಾ ಇಲಾಖೆ ನ್ಯಾಯ ಒದಗಿಸಬೇಕು ಮತ್ತು ಬೆಂಕಿ ಹಚ್ಚಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕೆಂದು ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್, ವಿಎನ್.ಪ್ರಕಾಶ್, ಮಳಲಕೆರೆ ಸಿದ್ದೇಶ್, ರಜಾಕ್ ಒತ್ತಾಯಿಸಿದ್ದಾರೆ. ಈ ಸಂಬಂಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆ ಕಾರ್ಯ ಮುಂದುವರೆದಿದೆ.
PublicNext
06/10/2021 01:33 pm