ಬೆಂಗಳೂರು: ಯುವತಿಯೊಬ್ಬಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಟ್ರೋಲ್ ಮಾಡಿದ್ದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹರೀಶ್ ಅಲಿಯಾಸ್ ಅಮಾಸೆ ಕೊಲೆಯಾದ ಯುವಕ. ಮಾಚೋಹಳ್ಳಿಯ ಕಾಮತ್ ಲೇಔಟ್‌ನಲ್ಲಿ ಕೊಲೆ ನಡೆದಿದ್ದು, ಈ ಸಂಬಂಧ ಇನ್ಸ್‌ಪೆಕ್ಟರ್ ಮಂಜುನಾಥ್ ಅಂಡ್ ಟೀಂ ಆರೋಪಿಗಳಾದ ಪ್ರಜ್ವಲ್ ಅಲಿಯಾಸ್ ಕಪ್ಪೆ. ಕಿರಣ ಅಲಿಯಾಸ್ ವಾಲೆ, ಮನೋಜ್, ಮೂರ್ತಿ, ಸಂದೀಪನನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳಾದ ಯುವರಾಜ ಅಲಿಯಾಸ್ ನಾಯಿ, ದರ್ಶನ್, ಕುಮಾರ್ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಆಗಿದ್ದೇನು?:
ಹರೀಶ್ ಗೆಳೆಯ ನವೀನ್ ಇನ್‌ಸ್ಟಾಗ್ರಾಮ್‌ನಲ್ಲಿ ಯುವತಿಯೊಬ್ಬಳಿಗೆ ಮೆಸೇಜ್ ಮಾಡಿದ್ದ. ಇದರಿಂದ ಕೋಪಗೊಂಡ ಯುವತಿಯ ಪ್ರಿಯಕರ ಪ್ರಜ್ವಲ್ ನವೀನ್‌ಗೆ ಫೋನ್ ಮಾಡಿ ಒಮ್ಮೆ ಎಚ್ಚರಿಕೆ ನೀಡಿದ್ದ. ಇದಾದ ಬಳಿಕ ಟ್ರೋಲ್ ಪೇಜ್‌ನಲ್ಲಿ ಯುವತಿಯನ್ನು ಟ್ರೋಲ್ ಮಾಡಲಾಗಿತ್ತು. ಇದರಿಂದ ಕೋಪಗೊಂಡ ಪ್ರಜ್ವಲ್ ಮತ್ತೆ ನವೀನ್‌ಗೆ ಫೋನ್ ಮಾಡಿ ಭೇಟಿಯಾಗುವಂತೆ ಕೇಳಿದ್ದಾನೆ. ಅದರಂತೆ ನವೀನ್ ತನ್ನ ಸ್ನೇಹಿತ ಹರೀಶ್ ಜೊತೆಗೆ ಬಂದಿದ್ದಾಗ ಪ್ರಜ್ವಲ್ ಹಾಗೂ ಆತನ ಗೆಳೆಯರು ಲಾಗ್, ಮಚ್ಚುಗಳಿಂದ ದಾಳಿ ನಡೆಸಿದ್ದಾರೆ.
ಈ ವೇಳೆ ನವೀನ್ ಬೆಂಬಲಕ್ಕೆ ನಿಂತ ಹರೀಶ್ ಮೇಲೆ ಪ್ರಜ್ವಲ್ ಆ್ಯಂಡ್ ಟೀಂ ದಾಳಿ ಮಾಡಿದೆ. ಪರಿಣಾಮ ಪ್ರಜ್ವಲ್ ತಲೆ ಮತ್ತು ಹೊಟ್ಟೆ ಭಾಗಕ್ಕೆ ಮಚ್ಚಿನಿಂದ ಕೊಚ್ಚಿದ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
PublicNext
05/10/2021 01:40 pm