ಚಿತ್ರದುರ್ಗ: ಕೆಎಸ್ಸಾರ್ಟಿಸಿ ಬಸ್ ನಿಲ್ಲಿಸುವ ಪ್ಲಾಟ್ ಫಾರಂ ಸ್ಥಳದಲ್ಲಿ ಯುವಕನೊಬ್ಬ ದ್ವಿಚಕ್ರ ವಾಹನ ನಿಲ್ಲಿಸಿದ್ದಾನೆ. ಅದನ್ನು ತೆಗೆಯುವಂತೆ ಅಲ್ಲಿನ ಸಿಬ್ಬಂದಿಗಳು ಮೈಕ್ ಹಿಡಿದು ಮೂರು ಬಾರಿ ಮನವಿ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ತಾಲೂಕಿನ ಹಳ್ಳಿಯೊಂದರ ಅಪರಿಚಿತ ಯುವಕ ಕೆಎಸ್ಸಾರ್ಟಿಸಿ ನಿಲ್ದಾಣದ ನಿಯಂತ್ರಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಕಚೇರಿಯೊಳಗೆ ನುಗ್ಗಿ ದೌರ್ಜನ್ಯವೆಸಗಿರುವ ಘಟನೆ ಹಿರಿಯೂರು ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸರ್ಕಾರಿ ಬಸ್ ನಿಲ್ದಾಣದಲ್ಲಿ ಬಸ್ ಗಳು ನಿಲ್ಲುವ ಸ್ಥಳದಳಲ್ಲಿ ತನ್ನ ಹೋಂಡಾ ಡಿಯೋ ದ್ವಿಚಕ್ರ ವಾಹನವನ್ನು ನಿಲ್ಲಿಸಿ, ಈಯರ್ ಫೋನ್ ಹಾಕಿಕೊಂಡು ಮಾತನಾಡುತ್ತಿದ್ದನು ಎನ್ನಲಾಗಿದೆ. ಇದನ್ನು ಗಮನಿಸಿದ ಅಲ್ಲಿನ ಸಿಬ್ಬಂದಿಗಳು ಆ ವ್ಯಕ್ತಿಗೆ ಗಾಡಿ ತೆಗೆಯುವಂತೆ ತಿಳಿಸಿದ್ದಾರೆ. ಬದಲಿಗೆ ಆ ವ್ಯಕ್ತಿ ಕಚೇರಿಯೊಳಗೆ ಬಂದು ಮಹಿಳಾ ಸಿಬ್ಬಂದಿ ಮೇಲೆ ದೌರ್ಜನ್ಯ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.ಇದಲ್ಲದೆ ಅತಿಕ್ರಮವಾಗಿ ಕಚೇರಿ ಪ್ರವೇಶ ಮಾಡಿದ್ದರಿಂದ ಮೇಲಾಧಿಕಾರಿಗಳ ಮೇರೆಗೆ ಘಟಕದ ಸಿಬ್ಬಂದಿಗಳು ಹಿರಿಯೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಗರ ಪೋಲಿಸ್ ಠಾಣೆಯಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡುವವರ ಸಂಖ್ಯೆ ಹೆಚ್ಚುತ್ತಿದೆ. ಪೋಲಿಸ್ ವ್ಯವಸ್ಥೆ ಇಲ್ಲ. ಪಕ್ಕದಲ್ಲೇ ಬಾರ್ ಅಂಗಡಿಗಳು ಇರುವುದರಿಂದ ಕುಡುಕರ ಸಂಖ್ಯೆ ಹೆಚ್ಚಾಗಿದೆ.ಕೂಡಲೇ ಬಾರ್ ಅಂಗಡಿಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಿಲ್ದಾಣದಲ್ಲಿ ಸಿಸಿ ಟಿವಿ ಕ್ಯಾಮೆರಾ ಆಳವಡಿಸಿ ಹಾಗೂ ಪೋಲಿಸ್ ಸಿಬ್ಬಂದಿ ನೇಮಿಸಬೇಕೆಂದು ಸಾರ್ವಜನಿಕರಿಂದ ಮಾತುಗಳು ಕೇಳಿ ಬರುತ್ತಿವೆ.
PublicNext
27/09/2021 06:10 pm