ವಿಜಯಪುರ: ಪ್ರೀತಿಸಿ ಮದುವೆಯಾದ ಪತ್ನಿ ಪಕ್ಕದ ಮನೆಯ ವ್ಯಕ್ತಿಯೊಂದಿಗೆ ಪರಾರಿಯಾದ ಹಿನ್ನೆಲೆಯಲ್ಲಿ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರದಲ್ಲಿ ನಡೆದಿದೆ.
ಜಿಲ್ಲೆಯ ತಾಳಿಕೋಟಿ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ವೆಂಕಟೇಶ ದ್ವಾರನಹಳ್ಳಿ (25) ಆತ್ಮಹತ್ಯೆಗೆ ಶರಣಾದ ಯುವಕ. ವೆಂಕಟೇಶ್ ಫೇಸ್ಬುಕ್ನಲ್ಲಿ ಲೈವ್ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿ ಸಾವಿಗೆ ಶರಣಾಗಿದ್ದಾರೆ.
ಮೃತ ವೆಂಕಟೇಶ್ ಎರಡು ವರ್ಷಗಳ ಹಿಂದೆ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ ವೆಂಕಟೇಶನ ಪಕ್ಕದ ಮನೆಯ ಸಹೋದರ ಸಂಬಂಧಿ ಶ್ರೀಶೈಲ್ ದೋರನಹಳ್ಳಿ ಎಂಬುವನ ಜೊತೆಗೆ ಪತ್ನಿ ಎಸ್ಕೇಪ್ ಆಗಿದ್ದಾಳೆ. ಈ ಬಗ್ಗೆ ತಾಳಿಕೋಟೆ ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದ. ಆದರೆ ವೆಂಕಟೇಶ ಜೊತೆಗೆ ಇರುವುದಿಲ್ಲ, ಪ್ರಿಯಕರ ಶ್ರೀಶೈಲ್ ಜೊತೆಗೆ ಇರೋದಾಗಿ ಪತ್ನಿ ಹೇಳಿದ್ದಳು ಎನ್ನಲಾಗಿದೆ. ಈ ಬಗ್ಗೆ ಪೊಲೀಸರು ಕೂಡ ಆಕೆಯ ಹಕ್ಕುಗಳ ಬಗ್ಗೆ ವೆಂಕಟೇಶಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಿದ್ದರಂತೆ. ಆದರೆ ಪತ್ನಿಯ ನಡೆಯಿಂದ ತೀವ್ರವಾಗಿ ಮನನೊಂದಿದ್ದ ವೆಂಕಟೇಶ, ಆತ್ಮಹತ್ಯೆಗೂ ಮುನ್ನ ತನ್ನ ಸಾವಿಗೆ ಶ್ರೀಶೈಲ್ ಹೊಣೆ ಎಂದು ಹೇಳಿ ನೇಣಿಗೆ ಶರಣಾಗಿದ್ದಾನೆ.
ಫೇಸ್ಬುಕ್ ವಿಡಿಯೋ ಕಂಡು ಜಮೀನಿನಲ್ಲಿ ನೇಣು ಬಿಗಿದುಕೊಂಡು ಒದ್ದಾಡುತ್ತಿದ್ದ ವೆಂಕಟೇಶ ಪ್ರಾಣ ಉಳಿಸಲು ಸ್ಥಳೀಯರು ಯತ್ನಿಸಿದ್ದಾರೆ. ಆದರೆ ತಾಳಿಕೋಟೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗದ ನಡುವೆ ಆತ ಸಾವನ್ನಪ್ಪಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಕುರಿತಂತೆ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
25/09/2021 08:51 pm