ಉಡುಪಿ: ಖಿನ್ನತೆಗಿಂತ ದೊಡ್ಡ ಕಾಯಿಲೆಯಿಲ್ಲ ಎನ್ನುತ್ತಾರೆ. ಆದರೆ ವ್ಯಕ್ತಿಯೊಬ್ಬನಿಗೆ ಖಿನ್ನತೆ ಇರಬಹುದು ಎಂಬುದನ್ನು ಗ್ರಹಿಸುವುದಕ್ಕೆ ಸಾಧ್ಯವಿಲ್ಲ. ಉತ್ಸಾಹದ ಒರತೆಯಂತೆ ಇದ್ದವರು, ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಉಡುಪಿಯ ಕುಕ್ಕಿಕಟ್ಟೆ ಸಮೀಪ ನಡೆದಿದೆ. ಈಕೆ ಬೇರಾರೂ ಅಲ್ಲ ,ಸಮಾಜ ಸೇವಕಿಯಾಗಿ, ರಾಷ್ಟ್ರೀಯ ಪಕ್ಷವೊಂದರ ಸದಸ್ಯೆಯಾಗಿ, ಬಡವರಿಗೆ ನೆರಳಾಗಿದ್ದ ಆಶಾ ಶೆಟ್ಟಿ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಈಕೆ ಸಾಯುವ ನಿರ್ಧಾರ ಕೈಗೊಂಡಿದ್ದಾರೆ.
ನಿನ್ನೆ ಮೊನ್ನೆ ಚೆನ್ನಾಗಿದ್ದವರು ಯಾಕೆ ಹೀಗೆ ಮಾಡಿದರು ಎಂದು ಜನ ಅಚ್ಚರಿ ಪಡುತ್ತಿದ್ದಾರೆ.ವಾಸ್ತವದಲ್ಲಿ ಇವರು ಒಳಗೊಳಗೇ ಕುಸಿದು ಹೋಗಿದ್ದರು. ಹತ್ತು ವರ್ಷಗಳ ಹಿಂದೆ ನಡೆದ ಒಂದು ದುರ್ಘಟನೆ ಇವರನ್ನು ಪದೇ ಪದೇ ಭಾದಿಸುತ್ತಿತ್ತು.ಕೆಲವರ್ಷಗಳ ಹಿಂದೆ ಹೆತ್ತ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಸಾವಿಗೆ ತಾನೇ ಕಾರಣ ಆಗಿಬಿಟ್ಟೆನಾ? ಎಂಬ ನೋವು ಆಶಾ ಶೆಟ್ಟಿಯನ್ನು ಒಳಗೊಳಗೇ ಕಾಡುತ್ತಿತ್ತು.ಪತಿಯ ಬಳಿ ಈ ವಿಚಾರವನ್ನು ಆಗಾಗ ಹೇಳಿಕೊಂಡಿದ್ದರು.ಮಗ ಸತ್ತು ಐದು ವರ್ಷಗಳ ಕಾಲ ಆಕೆ ಮನೆಯಿಂದ ಹೊರಗೆ ಬಂದಿರಲಿಲ್ಲ. ಕೊನೆಗೂ ಸ್ನೇಹಿತರು ಮತ್ತು ಮಗಳು ಈ ನೋವಿನಿಂದ ಹೊರತರಲು ಯಶಸ್ವಿಯಾಗಿದ್ದರು.
ಭಜನಾ ತಂಡಗಳಲ್ಲಿ ಹಾಡುತ್ತಾ, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತ, ಖುಷಿಯಲ್ಲಿದ್ದಂತೆ ನಟಿಸುತ್ತಿದ್ದರು. ಬಿಜೆಪಿ ಪಕ್ಷದ ಮಹಿಳಾ ಮೋರ್ಚಾ ದಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡರು. ಬಡ ಹೆಣ್ಣುಮಕ್ಕಳ ಮದುವೆಗೆ ಬೇಕಾದ ಚಿನ್ನವನ್ನು ದಾನಿಗಳ ನೆರವಿನೊಂದಿಗೆ ವ್ಯವಸ್ಥೆ ಮಾಡುತ್ತಿದ್ದರು. ಇತ್ತೀಚೆಗಷ್ಟೇ ಲಾಕ್ಡೌನ್ ಅವಧಿಯಲ್ಲಿ ಮಗಳಿಗೆ ಗೌಜಿಯೊಂದಲೇ ಮದುವೆ ಮಾಡಿಸಿದ್ದರು. ಬಹುಷಃ ಮಗಳ ಮದುವೆಗೆ ಕಾಯುತ್ತಿದ್ದರೋ ಏನೋ? ಒಳಗೊಳಗೇ ಬಾಧಿಸುತ್ತಿದ್ದ ಖಿನ್ನತೆಯಿಂದ ಕುಸಿದು ಹೋಗಿ ನೇಣಿಗೆ ಶರಣಾಗಿದ್ದಾರೆ.
PublicNext
15/09/2021 06:25 pm