ಚಿತ್ರದುರ್ಗ : ಮಹಿಳೆಯೊಬ್ಬರಿಂದ 6 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಭೂಸ್ವಾಧೀನ ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ನಡೆದಿದೆ. ಮಹಿಳೆಯ ದೂರಿನ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಾದ ಬಸವರಾಜ್ ಆರ್. ಮಗದುಮ್ ಹಾಗೂ ಪೋಲಿಸ್ ನಿರೀಕ್ಷಕರುಗಳಾದ ಪ್ರವೀಣ್ ಕುಮಾರ್, ಹಸನ್ ಸಾಬ್, ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ಹಿರಿಯೂರು ನಗರದ ಚಳ್ಳಕೆರೆ ರಸ್ತೆಯಲ್ಲಿರುವ ಭೂಸ್ವಾಧೀನ ಕಛೇರಿ ಹಾಗೂ ಅಧಿಕಾರಿ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಹಿರಿಯೂರು ಭೂಸ್ವಾಧೀನ ವಿಶೇಷ ಅಧಿಕಾರಿಗಳಾದ ವೀರೇಶ್ ಕುಮಾರ್, ಮ್ಯಾನೇಜರ್ ಮೋಹನ್ ಕುಮಾರ್, ಹಾಗೂ ಕಾರು ಚಾಲಕ ಮನ್ಸೂರ್ ಅವರು ಎಸಿಬಿ ಬಲೆಗೆ ಸಿಕ್ಕಿಬಿದ್ದಿರುವ ಭ್ರಷ್ಟಾ ಅಧಿಕಾರಿಗಳಾಗಿದ್ದಾರೆ.
ಬೀದರ್ ನಿಂದ ಹಿರಿಯೂರು ಮೂಲಕ ಶ್ರೀರಂಗಪಟ್ಟಣ ಹಾದು ಹೋಗುವ ಎನ್.ಹೆಚ್ -150ಎ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಹಿರಿಯೂರು ನಗರದ ವಿಎಂಪಿ ಮಹಲ್ ಹೋಟೆಲ್ ಮುಂಭಾಗದ ದೂರು ನೀಡಿರುವ ಮಹಿಳೆಯ ಜಮೀನು ಇದೆ. ಇವರ ಜಮೀನನ್ನು ರಸ್ತೆಗೆ ಭೂಸ್ವಾಧೀನ ಪಡಿಸಿಕೊಂಡು ಜಮೀನಿನ ಪರಿಹಾರ ಹಣ ನೀಡುವುದಕ್ಕೆ 9 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಆದರೆ ಇದಕ್ಕೆ ಮಹಿಳೆ ಒಪ್ಪದಿದ್ದಾಗ ಅಂತಿಮವಾಗಿ ಕಾರು ಚಾಲಕನ ಮಾತುಕತೆಯ ಮೂಲಕ 6 ಲಕ್ಷ ರೂಪಾಯಿ ಲಂಚ ನೀಡಲು ಒಪ್ಪಿಗೆ ನೀಡಿದ್ದಾರೆ. ಮಂಗಳವಾರ ಸಂಜೆ 7.30 ಸಮಯದಲ್ಲಿ ಮಹಿಳೆಯಿಂದ ಕಾರು ಚಾಲಕ ಹಣ ಪಡೆದು ಮ್ಯಾನೇಜರ್ ಮೋಹನ್ ಕುಮಾರ್ ಗೆ ಕೊಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ದಸ್ತಗಿರಿ ಮಾಡಿ ತನಿಖೆ ನಡೆಸಿದರು.
PublicNext
15/09/2021 09:36 am