ಶ್ರೀನಗರ: ಹಾಡಹಗಲೇ ನಡುರಸ್ತೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಉಗ್ರನೋರ್ವ ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ನಿನ್ನೆ (ಸೆಪ್ಟೆಂಬರ್ 12) ಶ್ರೀನಗರದ ಖನ್ಯಾರ್ ಪ್ರದೇಶದಲ್ಲಿ ನಡೆದಿದೆ.
ಪಿಎಸ್ ಖನ್ಯಾರ್ ಪಿಎಸ್‌ಐ (ಪ್ರೊಬೇಷನರಿ ಸಬ್ ಇನ್ಸ್‌ಪೆಕ್ಟರ್) ಅರ್ಷಿದ್ ಅಹ್ಮದ್ ಮೃತ ಪೊಲೀಸ್ ಅಧಿಕಾರಿ. ನಿನ್ನೆ ಮಧ್ಯಾಹ್ನ 1:35ರ ಸುಮಾರಿಗೆ ಖನ್ಯಾರ್‌ನಲ್ಲಿ ಅರ್ಷಿದ್ ಅಹ್ಮದ್ ಅವರ ಹಿಂದಿನಿಂದ ಬಂದ ಉಗ್ರನೋರ್ವ ಏಕಾಏಕಿ ಗುಂಡು ಹಾರಿಸಿದ್ದಾನೆ. ಇದರ ಪರಿಣಾಮ ಅರ್ಷಿದ್ ಅಹ್ಮದ್ ಗಾಯಗೊಂಡಿದ್ದರು. ಅವರನ್ನು ಶ್ರೀನಗರದ ಎಸ್‌ಎಮ್‌ಎಚ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.
ಅರ್ಷಿದ್ ಅಹ್ಮದ್ ಅವರ ಮೇಲೆ ಉಗ್ರ ನಡೆಸಿದ ಗುಂಡಿನ ದಾಳಿಯ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಉಗ್ರನ ಪತ್ತೆಗೆ ಬಲೆ ಬೀಸಿದ್ದಾರೆ.
PublicNext
13/09/2021 05:24 pm