ತಿರುವನಂತಪುರಂ: ಭಗ್ನ ಪ್ರೇಮಿಯೋರ್ವ ತನ್ನ ಪ್ರೇಯಸಿಗೆ 17 ಬಾರಿ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಕೇರಳ ತಿರುವನಂತಪುರಂನ ನೆದುಮಂಗಡ್ ಎಂಬಲ್ಲಿ ನಡೆದಿದೆ.
ಚಿರಕೋಣಂ ನಿವಾಸಿ ಅರುಣ್ ಕೊಲೆಗೈದ ಆರೋಪಿ. ನೆದುಮಂಗಡ್ ನಿವಾಸಿ ಸೂರ್ಯಗಾಯತ್ರಿ (20) ಕೊಲೆಯಾದ ಯುವತಿ. ಅರುಣ್ ಹಾಗೂ ಸೂರ್ಯಗಾಯತ್ರಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಸೂರ್ಯಗಾಯತ್ರಿ ಬೇರೊಬ್ಬನೊಂದಿಗೆ ಮದುವೆಯಾಗಿತ್ತು. ಆದರೆ ಸೂರ್ಯಗಾಯತ್ರಿ ಪತಿಯೊಂದಿಗೆ ಜಗಳವಾಡಿಕೊಂಡು ತವರು ಮನೆಗೆ ಬಂದು ವಾಸಿಸುತ್ತಿದ್ದಳು.
ಅರುಣ್ ಹಾಗೂ ಸೂರ್ಯಗಾಯತ್ರಿ ಮುಖಾಮುಖಿಯಾದಾಗೆಲ್ಲಾ ಜಗಳಕ್ಕೆ ಇಳಿಯುತ್ತಿದ್ದರು. ಇದೇ ವಿಚಾರಕ್ಕೆ ನಿನ್ನೆ ಮಧ್ಯಾಹ್ನ ಅರುಣ್ ಆಕೆ ಮೇಲೆ ದಾಳಿ ನಡೆಸಿದ್ದಾನೆ. ಎದೆ ಮತ್ತು ಕುತ್ತಿಗೆಗೆ 17 ಬಾರಿ ಚಾಕುವಿನಿಂದ ಇರಿದಿದ್ದಾನೆ. ಇದನ್ನು ಕಂಡ ಸೂರ್ಯಗಾಯತ್ರಿ ಪೋಷಕರು ಜೋರಾಗಿ ಕಿರುಚಿದ್ದು, ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದ್ದಾರೆ. ಕೃತ್ಯ ಎಸಗಿ ಮನೆಯೊಂದರ ಶೌಚಾಲಯದಲ್ಲಿ ಅಡಗಿಕೊಂಡಿದ್ದ ಆರೋಪಿ ಅರುಣ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಸೂರ್ಯಗಾಯತ್ರಿಯನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ಮೃತಪಟ್ಟಿದ್ದಾಳೆ.
PublicNext
31/08/2021 07:03 pm