ಹಾಸನ: ತನಗಿಂತ ಕಡಿಮೆ ಹಣಕ್ಕೆ ಆಟೋ ಬಾಡಿಗೆಗೆ ಹೋಗುತ್ತಾನೆ ಎಂಬ ಒಂದೇ ಕಾರಣಕ್ಕೆ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಆರೋಪಿ ಪ್ರಸನ್ನ (31)ನನ್ನು ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊಣನೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪ್ರಸನ್ನ ಮಲ್ಲಾಪುರ ಲಕ್ಕೂರು ಅರಣ್ಯ ಪ್ರದೇಶದ ಸ್ನೇಹಿತ ಜಗದೀಶ್ (42)ನನ್ನು ಎರಡು ದಿನದ ಹಿಂದೆ ಹತ್ಯೆಗೈದಿದ್ದಾನೆ. ಜಗದೀಶ್ ಮತ್ತು ಪ್ರಸನ್ನ ಇಬ್ಬರೂ ಗೆಳೆಯರಾಗಿದ್ದು, ಆಪೆ ಆಟೋ ಇಟ್ಟುಕೊಂಡು ಇಬ್ಬರೂ ಪಿರಿಯಾಪಟ್ಟಣ- ರಾಮನಾಥಪುರ ಆಟೋ ಸ್ಟಾಂಡ್‌ನಿಂದ ಬಾಡಿಗೆಗೆ ಹೋಗುತ್ತಿದ್ದರು.
ಜಗದೀಶ್ ತನ್ನ ಗೆಳೆಯ ಪ್ರಸನ್ನನಿಗಿಂತ ಕಡಿಮೆ ಹಣಕ್ಕೆ ಆಟೋ ಬಾಡಿಗೆಗೆ ಹೋಗುತ್ತಿದ್ದ. ಇದರಿಂದ ಪ್ರಸನ್ನನಿಗೆ ಸರಿಯಾಗಿ ಆಟೋ ಬಾಡಿಗೆ ಸಿಗುತ್ತಿರಲಿಲ್ಲ. ಇದೇ ಕಾರಣಕ್ಕೆ ಜಗದೀಶ್ ಮೇಲೆ ಕೋಪಗೊಂಡಿದ್ದ ಪ್ರಸನ್ನ, ಗುರುವಾರ ರಾತ್ರಿ ರಾಮನಾಥಪುರಕ್ಕೆ ಆಟೋ ಬಾಡಿಗೆ ಇದೆ ಎಂದು ಜಗದೀಶ್‍ನನ್ನು ಕರೆದೊಯ್ದಿದ್ದ. ನಿರ್ಜನ ಪ್ರದೇಶದಲ್ಲಿ ಆಟೋ ನಿಲ್ಲಿಸಿ ಮೊದಲು ಜಗದೀಶ್ ಮೇಲೆ ಹಲ್ಲೆ ಮಾಡಿ ನಂತರ ತಲೆಯ ಹತ್ಯೆಗೈದು ಪ್ರಸನ್ನ ಸ್ಥಳದಿಂದ ಪರಾರಿಯಾಗಿದ್ದ.
ಜಗದೀಶ್ ಕಾಣೆಯಾಗಿದ್ದಾನೆ ಎಂದು ಆತನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.
PublicNext
29/08/2021 11:48 am