ಶಿವಮೊಗ್ಗ: ಪ್ರೇಮ ವೈಫಲ್ಯದಿಂದಾಗಿ ಪಾಗಲ್ ಪ್ರೇಮಿಯೊಬ್ಬ ಪ್ರಿಯತಮೆಯನ್ನು ಕೊಲೆಗೈದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಹೊಸನಗರ ತಾಲೂಕಿನ ನೇರಲಗಿ ಗ್ರಾಮದ ಘಟನೆ ಬಳಿ ನಡೆದಿದೆ. ಅದೇ ಗ್ರಾಮದ ಕವಿತಾ (21) ಕೊಲೆಯಾದ ಯುವತಿ ಹಾಗೂ ಶಿವಮೂರ್ತಿ (21) ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದ ಭಗ್ನ ಪ್ರೇಮಿಯಾಗಿದ್ದಾನೆ. ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಕವಿತಾ ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಹೊಸನಗರ ತಾಲೂಕಿನ ಕಗಲಿ ಗ್ರಾಮದ ಶಿವಮೂರ್ತಿ ರಿಪ್ಪನ್ ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ. ಇಬ್ಬರೂ 7 ವರ್ಷದಿಂದ ಪ್ರೀತಿಸುತ್ತಿದ್ದರು. ಇತ್ತೀಚಿಗೆ ಕವಿತಾ, ಶಿವಮೂರ್ತಿ ಜೊತೆಗಿನ ಪ್ರೀತಿ ತೊರೆದು ಭದ್ರಾವತಿ ಮೂಲದ ಆಂಬ್ಯುಲೆನ್ಸ್ ಚಾಲಕನ ಪ್ರೇಮ ಪಾಶಕ್ಕೆ ಸಿಲುಕಿದ್ದಳು. ಆಂಬ್ಯುಲೆನ್ಸ್ ಚಾಲಕನ ಜೊತೆ ಕವಿತಾಗೆ ಪ್ರೇಮಾಂಕುರವಾಗುತ್ತಿದ್ದಂತೆ ಶಿವಮೂರ್ತಿಯನ್ನು ದೂರ ಮಾಡ ತೊಡಗಿದ್ದಳು.
ಇದರಿಂದ ರೊಚ್ಚಿಗೆದ್ದ ಭಗ್ನಪ್ರೇಮಿ ಶಿವಮೂರ್ತಿ, ಬುಧವಾರ ಮಧ್ಯಾಹ್ನ ಕವಿತಾಳನ್ನು ನಿನ್ನ ಜೊತೆ ಮಾತನಾಡಬೇಕು ಎಂದು ನೇರಲಗಿ ಬಳಿ ಕರೆಯಿಸಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಗೆಳತಿಯನ್ನು ಕೊಲೆಗೈದು, ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಲ್ಲದೆ ಕವಿತಾಳನ್ನು ತಾನೇ ಕೊಲೆಗೈದಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಈ ಸಂಬಂಧ ರಿಪ್ಪನ್ ಪೇಟೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
PublicNext
27/08/2021 08:48 am