ದಾವಣಗೆರೆ: ನಗರದ ಹೊರವಲಯದ ಆಂಜನೇಯ ಕಾಟನ್ ಮಿಲ್ ನಲ್ಲಿ ನಡೆದಿದ್ದ ಸಹೋದರಿಯರಿಬ್ಬರ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು ಹಂತಕನನ್ನು ಬಂಧಿಸಿದ್ದಾರೆ.
ಮಂಜುನಾಥ್ ಸೆರೆ ಸಿಕ್ಕ ಆರೋಪಿ. ಬೆಂಗಳೂರಿನ ಚನ್ನಾಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಂದ ಹಾಗೆ ಈತ ಗೌರಮ್ಮಳ ಪತಿ. ಕಳೆದ ಹತ್ತು ದಿನಗಳ ಹಿಂದೆ ಆಂಜನೇಯ ಕಾಟನ್‌ಮಿಲ್ ಬಡಾವಣೆಯ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಆಂಜನೇಯ ಕಾಟನ್ ಮಿಲ್ ಗೆ ಕೂಲಿ ಕೆಲಸಕ್ಕೆ ಗೌರಮ್ಮ ಹಾಗೂ ರಾಧಮ್ಮ ಅಲಿಯಾಸ್ ರಾಧಕ್ಕ ಮೃತದೇಹ ಪತ್ತೆಯಾಗಿದ್ದವು. ನಾಲ್ಕೈದು ದಿನಗಳಾದರೂ ಇಬ್ಬರು ಮನೆಯಿಂದ ಹೊರ ಬಾರದ ಕಾರಣ ಮನೆಯ ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಬೆನಕಹಳ್ಳಿ ವಾಸಿಯಾದ ಇಬ್ಬರು ಕಳೆದ ಕೆಲ ವರ್ಷಗಳ ಹಿಂದೆಯಷ್ಟೇ ದಾವಣಗೆರೆಗೆ ಬಂದು ನೆಲೆಸಿದ್ದರು. ಗೌರಮ್ಮಳ ಪತಿ ಮಂಜುನಾಥ್ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ಇಬ್ಬರ ನಡುವೆ ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಜಗಳವೂ ನಡೆದಿತ್ತು. ಹಿರಿಯರ ಮುಂದೆ ರಾಜಿ ಪಂಚಾಯಿತಿಯೂ ನಡೆದಿತ್ತು. ಆದ್ರೆ ತನ್ನ ಪತ್ನಿ ಅನೈತಿಕ ಚಟುವಟಿಕೆ ಹೊಂದಿದ್ದಾಳೆ ಎಂದು ಆಗಾಗ್ಗೆ ಆರೋಪಿಸಿ ಜಗಳ ಮಾಡುತ್ತಿದ್ದ. ಹತ್ತು ದಿನಗಳ ಹಿಂದೆ ಮನೆಗೆ ಬಂದವನು ಪತ್ನಿ ಜೊತೆ ಮತ್ತೆ ಜಗಳ ಮಾಡಿದ್ದ. ಈ ವೇಳೆ ಮಾತಿಗೆ ಮಾತು ಬೆಳೆದು ಗೌರಮ್ಮಳನ್ನು ಕೊಲೆ ಮಾಡಿದ್ದ. ಜೊತೆಗಿದ್ದ ರಾಧಮ್ಮ ಎಲ್ಲಿ ತನ್ನ ವಿರುದ್ಧ ಸಾಕ್ಷ್ಯ ಹೇಳ್ತಾಳೆ ಎಂಬ ಭಯದಲ್ಲಿ ಆಕೆಯ ಕತೆ ಮುಗಿಸಿದ್ದ.
ರಾಧಮ್ಮಳದ್ದು ಡೈವೋರ್ಸ್ ಆದ ಕಾರಣ ಸಹೋದರಿ ಜೊತೆಗೆ ಒಂದೇ ಮನೆಯಲ್ಲಿ ವಾಸ ಮಾಡ್ತಿದ್ದರು. ಗಂಡ ಹೆಂಡತಿ ನಡುವೆ ಆರಂಭದಲ್ಲಿ ಚೆನ್ನಾಗಿದ್ದರೂ ಬರಬರುತ್ತಾ ಸಂಬಂಧ ಹದಗೆಟ್ಟಿತ್ತು. ಮಂಜುನಾಥನು ತನ್ನ ಪತ್ನಿ ಗೌರಮ್ಮಳ ನಡತೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ. ಅನೈತಿಕ ಸಂಬಂಧ ಹೊಂದಿದ್ದೀಯಾ ಎಂಬ ವಿಚಾರ ಪ್ರಸ್ತಾಪಿಸಿ ಮಂಜುನಾಥನು ಗಲಾಟೆ ಮಾಡುತ್ತಿದ್ದ. ಇದು ಗೌರಮ್ಮಳಿಗೆ ಸದಾ ಕಿರಿಕಿರಿ ಆಗಿತ್ತು. ಕಳೆದ ಹತ್ತು ದಿನಗಳ ಹಿಂದೆ ಮನೆಗೆ ಬಂದಿದ್ದ ಆರೋಪಿಯು ತನ್ನ ಪತ್ನಿಯ ಜೊತೆಗೆ ಆಕೆಯ ಸಹೋದರಿಯನ್ನು ಕೊಂದು ಪರಾರಿಯಾಗಿದ್ದ. ವಿಚಾರಣೆ ವೇಳೆ ಕೊಂದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.
PublicNext
03/08/2021 03:16 pm