ಬೆಳಗಾವಿ: ನಗರದ ಟ್ರಾಫಿಕ್ ಪೊಲೀಸರ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬರು ಮಾಂಗಲ್ಯ ಮಾರಿ ದಂಡ ಕಟ್ಟಲು ಮುಂದಾಗಿದ್ದಾರೆ. ಈ ಘಟನೆ ಕಳೆದ ಭಾನುವಾರ ಮಧ್ಯಾಹ್ನ ಬೆಳಗಾವಿ ಬಸ್ ನಿಲ್ದಾಣ ಬಳಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹುಲ್ಲೋಳ್ಳಿಹಟ್ಟಿ ಗ್ರಾಮ ಬಳಿ ದಂಪತಿ ತೆರಳುತ್ತಿದ್ದ ಬೈಕ್ ತಡೆದಿದ್ದ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಇಲ್ಲದ ಕಾರಣಕ್ಕೆ ದಂಡ ಹಾಕ್ತೀನಿ ಅಂದಿದ್ದಾರೆ. ಈಗಾಗಲೇ ರಸೀದಿ ಹರಿದಿದ್ದೇವೆ, ದಂಡ ಕೊಡೋವರೆಗೂ ಬಿಡಲ್ಲ ಅಂತಾ ಟ್ರಾಫಿಕ್ ಪೊಲೀಸರು ಪಟ್ಟು ಹಿಡಿದಿದ್ದಾರೆ.
ಮಾರ್ಕೆಟ್ ನಲ್ಲಿ ಎಲ್ಲಾ ಹಣ ಖಾಲಿಯಾಗಿದೆ ಕೇವಲ ನೂರು ರೂಪಾಯಿ ಇದೆ ಎಂದ ಮಹಿಳೆ ದಯಮಾಡಿ ನಮ್ಮನ್ನ ಬಿಟ್ಟು ಬಿಡಿ ಎಂದು ಗೋಗರೆದಿದ್ದಾಳೆ. ಇದಕ್ಕೆ ಅದೆಲ್ಲ ಆಗೋಲ್ಲಮ್ಮ, ದಂಡ ಕಟ್ಟಿಯೇ ಹೋಗಬೇಕು ಅಂತಾ ಟ್ರಾಫಿಕ್ ಎಎಸ್ಐ ಅಲ್ತಾಫ್ ಹುಸೇನ್ ಕೊಲ್ಲಾಪುರೆ ತಾಕೀತು ಮಾಡಿದ್ದಾರೆ ಎಂಬ ಆರೋಪ ಇದೆ.
ಕೊನೆಗೆ ಹಣ ಇಲ್ಲದ್ದಕ್ಕೆ ತನ್ನ ಕೊರಳಲ್ಲಿದ್ದ ಮಂಗಲಸೂತ್ರ ತೆಗೆದ ಭಾರತಿ ಎಂಬ ಮಹಿಳೆ ತನ್ನ ಪತಿಯ ಕೈಗೆ ಅದನ್ನ ಕೊಟ್ಟು ಇದನ್ನ ಮಾರಿ ಬಂದ ಹಣದಲ್ಲಿ ದಂಡ ಪಾವತಿಸಿ ಎಂದಿದ್ದಾಳೆ. ಕೊನೆಗೆ ಎರಡು ತಾಸು ಕಾಯ್ದು ಕಾಯ್ದು ಸುಸ್ತಾದ ನಂತರ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಬಂದಿದ್ದಾರೆ. ವಿಷಯ ಗೊತ್ತಾಗಿ ದಂಪತಿಯನ್ನು ಬಿಟ್ಟು ಕಳಿಸಿದ್ದಾರೆ. ಟ್ರಾಫಿಕ್ ಪೊಲೀಸರ ಈ ಅಮಾನವೀಯ ಕಾರ್ಯಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.
PublicNext
25/02/2021 06:19 pm