ಚಿಕ್ಕಬಳ್ಳಾಪುರ: ಜಿಲ್ಲೆಯ ಹಿರೇನಾಗವೇಲಿ ಗ್ರಾಮದ ಭ್ರಮರವಾಸಿನಿ ಎಂ. ಸ್ಯಾಂಡ್ ಕ್ರಷರ್ಗೆ ಸೇರಿದ ಜಿಲೆಟಿನ್, ಬೆಟ್ಟದ ಮೇಲೆ ಸ್ಫೋಟಗೊಂಡ ಸ್ಥಳಕ್ಕೆ ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸುಧಾಕರ್ ಅವರು, ''ಕೆಲ ದಿನಗಳ ಹಿಂದೆ ಭ್ರಮರವಾಸಿನಿ ಕ್ವಾರಿ ಮೇಲೆ ಎಸ್‌ಪಿ ದಾಳಿ ನಡೆಸಿ ನಿಯಮ ಉಲ್ಲಂಘಿಸಿದ ಕಾರಣ ಫೆ.7 ರಂದು ಕ್ವಾರಿ ಕ್ಲೋಸ್ ಮಾಡಿದ್ದರು. ಆದರೂ ಸ್ಫೋಟ ಸಂಭವಿಸಿರುವುದು ದುರಂತ. ಭ್ರಮರವಾಸಿನಿ ಮಾಲೀಕರು ಜಿಲೆಟಿನ್ ಕಡ್ಡಿಗಳನ್ನ ದಾಸ್ತಾನು ಮಾಡಿದ್ದರು ಅಂತ ತಿಳಿದಿದೆ. ಅದೇ ದಾಸ್ತಾನು ಕಾಡಿನಲ್ಲಿ ಎಸೆದು ಹೋಗಲು ಬಂದಾಗ ಮೊಬೈಲ್ ಆನ್ ಮಾಡಿದ್ದರಿಂದ ಸ್ಫೋಟ ಸಂಭವಿಸಿರುವ ಸಾಧ್ಯತೆಗಳಿವೆ. ಪೊಲೀಸರು ಪ್ರಾಥಮಿಕ ತನಿಖೆ ಮಾಡಿ ವರದಿ ಸಲ್ಲಿಸಲಿದ್ದಾರೆ'' ಎಂದು ಮಾಹಿತಿ ನೀಡಿದ್ದಾರೆ.
ಸ್ಫೋಟದಲ್ಲಿ ಒಟ್ಟು ಆರು ಜನರು ಸಾವನ್ನಪ್ಪಿದ್ದಾರೆ. ಭ್ರಮರವಾಸಿನಿಯ ಮೂವರು ಮಾಲೀಕರ ಬಂಧನಕ್ಕಾಗಿ ತಂಡ ರಚನೆ ಮಾಡಲಾಗಿದ್ದು, ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಈ ವೇಳೆ ಚಿಕ್ಕಬಳ್ಳಾಪುರ ಡಿಸಿ ಲತಾ ಆರ್, ಎಸ್‌ಪಿ ಮಿಥುನ್ ಕುಮಾರ್ ಹಾಗೂ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್, ಜೊತೆಗೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುರ್ಘಟನೆಗೆ ಸಂಬಂಧಿಸಿದಂತೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮಂಚೇನಹಳ್ಳಿಯಲ್ಲಿ ಸ್ಫೋಟಕಗಳ ತಯಾರಿ ಮಾಡುವ ಅಂಗಡಿಯನ್ನು ಇಟ್ಟುಕೊಂಡಿದ್ದ ಗಂಗೊಜೀ ರಾವ್ ಎಂಬಾತ ಸ್ಫೋಟಕಗಳನ್ನು ಕ್ರಷರ್ಗೆ ಸರಬರಾಜು ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಈತನನ್ನು ಪೊಲೀಸರು ಬಂಧಿಸಿದ್ದಾರೆ.
PublicNext
23/02/2021 08:09 am