ಚಿಕ್ಕಮಗಳೂರು: ತಾಯಿಯನ್ನು ಕಳೆದುಕೊಂಡು ದುಃಖದಲ್ಲಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಮೇಲೆ 30ಕ್ಕೂ ಹೆಚ್ಚು ಮಂದಿ ಕಳೆದ ನಾಲ್ಕೈದು ತಿಂಗಳಿಂದ ಸಾಮೂಹಿಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಶೃಂಗೇರಿಯಲ್ಲಿ ವಾಸವಿದ್ದ ಶಿಗ್ಗಾವಿ ಮೂಲದ 15 ವರ್ಷ ವಯಸ್ಸಿನ ಬಾಲಕಿ ಮೇಲೆ ಕಿಕ್ರೆ ಸ್ಮಾಲ್ ಅಭಿ ಮತ್ತು ಆತನ ಸ್ನೇಹಿತರಾದ ಗಿರೀಶ್ ಆನೆಗುಂದ, ಹೊಳೆಕೊಪ್ಪದ ವಿಕಾಶ್, ಮಣಿಕಂಠ, ಸಂಪತ್ ನೆಮ್ಮಾರ್, ಶೃಂಗೇರಿಯ ಅಶ್ವತ್ ಗೌಡ, ಆನೆಗುಂದದ ರಾಜೇಶ್, ಅಮಿತ್, ಕುರುಬಗೆರೆಯ ಸಂತೋಷ, ಹೆಗ್ಗದ್ದೆಯ ದೀಕ್ಷಿತ್, ಹೆರೂರಿನ ಸಂತೋಷ್, ನಿರಂಜನ್ ಕಿಗ್ಗ, ಶೃಂಗೇರಿಯ ನಯನಗೌಡ, ಅಭಿಗೌಡ, ಖಾಂಡ್ಯದ ಯೋಗೀಶ್ ಸೇರಿ 30ಕ್ಕೂ ಹೆಚ್ಚು ಮಂದಿ ನಿರಂತರ ಅತ್ಯಾಚಾರ ನಡೆಸಿ ಲೈಂಕಿಗ ದೌರ್ಜನ್ಯವೆಸಗಿದ್ದಾರೆ. 15ಕ್ಕೂ ಅಧಿಕ ಆರೋಪಿಗಳ ಗುರುತೇ ಬಾಲಕಿ ಇಲ್ಲ .
ಆಗಿದ್ದೇನು?: ತಾಯಿ ನಿಧನದ ದುಃಖದಲ್ಲಿದ್ದ ಬಾಲಕಿಯ ಮೇಲೆ 2020ರ ಸೆಪ್ಟೆಂಬರ್ 1ರಂದು ಕಿಕ್ರೆ ಸ್ಮಾಲ್ ಅಭಿ ಹಾಗೂ ಆತನ ಕೆಲ ಗೆಳೆಯರು ಅತ್ಯಾಚಾರ ಎಸಗಿ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ವಿಡಿಯೋ ಮೂಲಕ ಬ್ಲಾಕ್‌ಮೇಲ್ ಮಾಡಿ 2021ರ ಜನವರಿ 27ರವರೆಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ. ಈ ಸಂಬಂಧ ವ್ಯಕ್ತಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ದುಷ್ಕೃತ್ಯಕ್ಕೆ ಸಂತ್ರಸ್ತ ಬಾಲಕಿಯ ಚಿಕ್ಕಮ್ಮ ಗೀತಾಳ ಸಹಕಾರವೂ ಇದೆ ಎಂದು ದೂರಿದ್ದರು.
ಈ ಕುರಿತು ಜ.30ರಂದು ಎಫ್ಐಆರ್ ದಾಖಲಿಸಿಕೊಂಡ ಶೃಂಗೇರಿ ಠಾಣೆ ಪೊಲೀಸರು ಬಾಲಕಿಯನ್ನು ರಕ್ಷಿಸಿದ್ದಾರೆ. ಆಕೆಯ ಹೇಳಿಕೆ ಆಧಾರಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಅವರು ಶನಿವಾರ ರಾತ್ರಿ ಶೃಂಗೇರಿ ಸಿಡಿಪಿಒ ಎನ್.ಜಿ.ರಾಘವೇಂದ್ರ ಅವರ ಮೂಲಕ ನೀಡಿದ ದೂರನ್ನು ಆಧರಿಸಿ ಒಟ್ಟು 17 ಆರೋಪಿಗಳ ವಿರುದ್ಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
31/01/2021 08:17 pm