ಭೋಪಾಲ್: ಸಾಮಾಜಿಕ ಜಾಲತಾಣದಲ್ಲಿ ತಾವು ಹಾಕಿದ ಫೋಟೋ, ವಿಡಿಯೋಗೆ ಲೈಕ್ ಬರಲಿಲ್ಲ ಅಂತ ಕೆಲವರು ಆತ್ಮಹತ್ಯೆಗೆ ಶರಣಾದ ಪ್ರಕರಣಗಳ ಬಗ್ಗೆ ಕೇಳಿದ್ದೇವೆ, ಓದಿದ್ದೇವೆ. ಆದರೆ ಇಲ್ಲೊಬ್ಬ ಭೂಪ ಚಾಟಿಂಗ್ ಸಿಲ್ಲಿಸಿದ ವಿವಾಹಿತ ಗೆಳತಿಯನ್ನೇ ಕೊಲೆಗೈದ ಅಮಾನವೀಯ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಯುವಕ ಸೌರಭ್ ಕೃತ್ಯಕ್ಕೆ ಪ್ರಿಯಾ ಅಗರ್‍ವಾಲ್(26) ಬಲಿಯಾಗಿದ್ದಾಳೆ. ಪ್ರಿಯಾಗೆ ಮದುವೆಯಾಗಿದ್ದು, ಪತಿ ಮತ್ತು ಮುದ್ದಾದ ಮಗಳೊಂದಿಗೆ ಇಂದೋರ್ ನಲ್ಲಿ ನೆಲೆಸಿದ್ದಳು. ಕಳೆದ ವರ್ಷ ಆಕೆಗೆ ಆನ್‌ಲೈನ್‌ನಲ್ಲಿ ಸೌರಭ್ ಪರಿಚಯವಾಗಿದ್ದ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಚಾಟ್ ಮಾಡುತ್ತಾ, ಮಾಡುತ್ತಾ ಒಬ್ಬರಿಗೊಬ್ಬರು ಆತ್ಮೀಯರಾದರು. ಆದರೆ ಕಳೆದ ಕೆಲ ದಿನಗಳಿಂದ ಪ್ರಿಯಾ ಸೌರಭ್ ಜೊತೆ ಮಾತನಾಡುವುದನ್ನು ಕಡಿಮೆ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಸೌರಭ್, ಆಕೆಯನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದಾನೆ.
ಪ್ರಿಯಾ ಮಗಳೊಂದಿಗೆ ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಸೌರಭ್‌ನನ್ನು ಭೇಟಿಯಾಗಲು ಗ್ಯಾನಶೀಲ ಸೂಪರ್ ಸಿಟಿ ಬಳಿ ಇರುವ ಖಾಲಿ ಜಾಗಕ್ಕೆ ಬಂದಿದ್ದಾಳೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದ್ದು, ಕೋಪಗೊಂಡ ಸೌರಭ್ ತನ್ನ ಬಳಿ ಇದ್ದ ಕತ್ತರಿಯಿಂದ ಪ್ರಿಯಾಳ ಹೊಟ್ಟೆಗೆ ಎರಡು ಬಾರಿ ಚುಚ್ಚಿದ್ದಾನೆ. ಗಂಭೀರವಾಗಿ ಗಾಯೊಂಡ ಪ್ರಿಯಾ ರಸ್ತೆ ಬದಿಯ ಅಂಗಡಿಯೊಂದರ ಮುಂದೆ ಕುಸಿದು ಬಿದ್ದು ಮಗಳ ಎದುರೇ ಪ್ರಾಣ ಬಿಟ್ಟಿದ್ದಾಳೆ. ಇತ್ತ ಆರೋಪಿ ಸೌರಭ್ ಏನೂ ಗೊತ್ತಿಲ್ಲ ಎಂಬಂತೆ ಸ್ಕೂಟರ್ ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಘಟನೆಯ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಇಂದೋರ್ ಪೊಲೀಸರು ಆರೋಪಿಗೆ ಬಲೆ ಬೀಸಿದ್ದಾರೆ.
PublicNext
30/01/2021 12:46 pm