ನವದೆಹಲಿ: ಕಿಲಾಡಿ ಕಳ್ಳನೊಬ್ಬ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್ ಧರಿಸಿ 13 ಕೋಟಿ ರೂ. ಮೌಲ್ಯದ 25 ಕೆಜಿ ಚಿನ್ನಾಭರಣ ಕದ್ದು ಸಿಕ್ಕಿಬಿದ್ದ ಘಟನೆ ದೆಹಲಿಯಲ್ಲಿ ನಡೆದಿದೆ.
ಆಗ್ನೇಯ ದೆಹಲಿಯ ಕಲ್ಕಾಜಿ ಪ್ರದೇಶದಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಶೇಖ್ ನೂರ್ ಬಂಧಿತ ಆರೋಪಿ. ಶೇಖ್ ನೂರ್ ತಾನು ವಾಸವಿದ್ದ ಪ್ರದೇಶದ ಅಂಜನಿ ಜ್ಯುವೆಲ್ಲರ್ಸ್ ಶೋ ರೂಂನಲ್ಲಿ ಬುಧವಾರ ತಡರಾತ್ರಿ 13 ಕೋಟಿ ರೂ. ಮೌಲ್ಯದ ಆಭರಣಗಳನ್ನು ಲೂಟಿ ಮಾಡಿದ್ದಾನೆ.
ಶೇಖ್ ನೂರ್ ಲೂಟಿ ಮಾಡಿದ ಸಂಪೂರ್ಣ ದೃಶ್ಯವು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೊದಲು ಶೋ ರೂಂ ಕಾಂಪ್ಲೆಕ್ಸ್ ನಲ್ಲಿ ಮೆಟ್ಟಿಲುಗಳ ಗೇಟ್ ಕೀಲಿ ಮುರಿದಿದ್ದಾನೆ. ಬಳಿಕ ಮೇಲೆ ಹತ್ತಿ ಮೂರನೇ ಮಹಡಿಯಿಂದ ಚಿನ್ನಾಭರಣದ ಶೋ ರೂಂಗೆ ಎಂಟ್ರಿ ಕೊಟ್ಟಿದ್ದಾನೆ. ರಾತ್ರಿ 9:40ರ ಸುಮಾರಿಗೆ ಅಂಗಡಿಯ ಒಳಗೆ ಪ್ರವೇಶಿಸಿದ ಆತ ಆಭರಣ ದೋಚಿ ಮುಂಜಾನೆ 3:50ಕ್ಕೆ ಅಲ್ಲಿಂದ ನಿರ್ಗಮಿಸಿದ್ದಾರೆ.
ಘಟನೆ ಬೆಳಕಿಗೆ ಬಂದ ತಕ್ಷಣವೇ ಅಂಜನಿ ಜ್ಯುವೆಲ್ಲರ್ಸ್ ಅಂಗಡಿಯ ವ್ಯವಸ್ಥಾಪಕ ಕಲ್ಕಾಜಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಕಲ್ಕಾಜಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಜೊತೆಗೆ ಆತನ ಬಳಿ 25 ಕೆಜಿ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
PublicNext
22/01/2021 11:22 am