ಭೋಪಾಲ್: ಮಧ್ಯ ಪ್ರದೇಶದಲ್ಲಿ ನಕಲಿ ಮದ್ಯಕ್ಕೆ ಮತ್ತೆ 11 ಮಂದಿ ಬಲಿಯಾಗಿದ್ದಾರೆ. ಮೊರೆನಾ ಜಿಲ್ಲೆಯಲ್ಲಿ ಸೋಮವಾರ ನಕಲಿ ಮದ್ಯ ಸೇವಿಸಿ 11 ಮಂದಿ ಮೃತಪಟ್ಟಿದ್ದು, 8 ಮಂದಿ ಅಸ್ವಸ್ಥರಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮೊರೆನಾದ ವರಿಷ್ಠ ಪೊಲೀಸ್ ಅಧಿಕಾರಿ ಅನುರಾಗ್ ಸುಜಾನಿಯಾ, ‘ಕೆಲವು ಗ್ರಾಮಸ್ಥರು ಬಿಳಿ ಬಣ್ಣದ ಮದ್ಯ ಸೇವಿಸಿದ್ದಾರೆ. ಪರಿಣಾಮ ಮನ್ಪುರ ಮತ್ತು ಪಹಾವಲಿ ಗ್ರಾಮದ 11 ಮಂದಿ ಮೃತಪಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಮೇಲೆಯೇ ಸಾವಿನ ನಿಖರ ಕಾರಣ ತಿಳಿಯಲಿದೆ’ ಎಂದು ತಿಳಿಸಿದ್ದಾರೆ.
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್, 'ರಾಜ್ಯದಲ್ಲಿ ನಕಲಿ ಮದ್ಯ ಮಾಫಿಯಾ ಬಹಳ ಹಾನಿಯನ್ನುಂಟು ಮಾಡುತ್ತಿದೆ. ಈ ಹಿಂದೆ ಉಜ್ಜೈನಿಯಲ್ಲಿ 16 ಜನರು ಮೃತಪಟ್ಟಿದ್ದರು. ಈಗ ಮೊರೆನಾದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೇ ಈ ರೀತಿ ಎಲ್ಲಿಯವರೆಗೆ ನಕಲಿ ಮದ್ಯ ಜನರನ್ನು ಬಲಿ ಪಡೆಯುತ್ತದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
PublicNext
12/01/2021 03:34 pm