ಪ್ರಾಣಿಗಳು ಸಹಜವಾಗಿ ತಮ್ಮ ರಕ್ಷಣೆಗಾಗಿ ಜನರನ್ನು ಹೆದರಿಸುವುದು ಸಹಜ. ಹೀಗೆ ರಸ್ತೆ ಬದಿಯಲ್ಲಿ ತಾಯಿಯ ಪಕ್ಕ ನಿಂತಿದ್ದ ಕರುವೊಂದು ವ್ಯಕ್ತಿಯೊಬ್ಬನಿಗೆ ಗುದ್ದಿದೆ. ಇದರಿಂದ ಕೆರಳಿದ ವ್ಯಕ್ತಿ ಕರುವಿಗೆ ಹೊಡೆದು, ಒದ್ದು ನಂತರ ಇಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ದೆಹಲಿ ಪೊಲೀಸರ ಅತಿಥಿಯಾಗಿದ್ದಾನೆ.
ಕಮಲ್ ಪೊಲೀಸ್ ಅತಿಥಿಯಾದ ವ್ಯಕ್ತಿ. ಪೂರ್ವ ದೆಹಲಿಯ ವೆಸ್ಟ್ ವಿನೋದನಗರದಲ್ಲಿ ಮಂಗಳವಾರ ಕಮಲ್ ಹೋಗುತ್ತಿದ್ದ ದಾರಿಯಲ್ಲಿ ಕರುವೊಂದು ಅಚಾನಕ್ಕಾಗಿ ಪಕ್ಕದಿಂದ ಗುಮ್ಮಿದೆ. ಇದರಿಂದ ಕೋಪಗೊಂಡ ಕಮಲ್ ಕರುವಿಗೆ ಬೂಟು ಕಾಲಿನಿಂದ ಒದ್ದು ಹೊಡೆದಿದ್ದಾರೆ. ಅಷ್ಟಕ್ಕೆ ಬಿಡದೆ ರಸ್ತೆಯಲ್ಲಿ ಬಿದ್ದ ತಮ್ಮ ಕವರ್ ಇತ್ಯಾದಿಯನ್ನು ಎತ್ತಿಕೊಂಡು ಅಲ್ಲೇ ಇದ್ದ ಇಟ್ಟಿಗೆಯನ್ನು ಕೈಗೆತ್ತಿಕೊಂಡು ಕರುವಿನ ಮೇಲೆ ಹಲ್ಲೆ ಮಾಡಿದ್ದಾರೆ. ಪರಿಣಾಮ ಅಸ್ವಸ್ಥಗೊಂಡ ಕರು ಕುಸಿದು ಕೆಳಗೆ ಬೀಳುತ್ತದೆ. ಆಗ ಕಮಲ್ ಅಲ್ಲಿಂದ ಕಾಲ್ಕಿಳುತ್ತಾನೆ.
ಈ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ಬಗ್ಗೆ ಮಾಹಿತಿ ಸಿಕ್ಕ ಮಂಡಾವಲಿ ಠಾಣೆ ಪೋಲೀಸರು ಪ್ರಾಣಿ ರಕ್ಷಣಾ ಕಾಯ್ದೆಯಡಿ ಕ್ರೌರ್ಯ ಎಸಗಿದ್ದಕ್ಕೆ ಕಮಲ್ನನ್ನು ಬಂಧಿಸಿದ್ದಾರೆ. ಕರುವನ್ನು ವೈದ್ಯಕೀಯ ಶುಶ್ರೂಷೆಗಾಗಿ ಸಂಜಯ ಗಾಂಧಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ವರದಿಯಾಗಿದೆ.
PublicNext
06/01/2021 10:01 pm