ಬೆಂಗಳೂರು: ಸರ್ಕಾರದ ಮುದ್ರೆ ಬಳಸಿ ನಕಲಿ ಐಡಿ ಕಾರ್ಡ್ ಮಾಡಿ ಸಾರ್ವಜನಿಕರಿಗೆ ಪಂಗನಾಮ ಹಾಕುತ್ತಿದ್ದ ಖತರ್ನಾಕ್ ಗ್ಯಾಂಗ್ ಸದಸ್ಯರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಿನ ಕನಕಪುರ ರಸ್ತೆಯ ಹೆರಿಟೇಜ್ ಅಪಾರ್ಟ್ ಮೆಂಟ್ ನಲ್ಲಿ ನಕಲಿ ಐಡಿ ಜಾಲದ ದಂಧೆ ನಡೆಯುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಖಾಸಗಿ ಕಂಪನಿಯ ಉದ್ಯೋಗಿಗಳೂ ಸೇರಿದಂತೆ ಒಟ್ಟು 10 ಜನರನ್ನು ಬಂಧಿಸಿದ್ದಾರೆ.
ಇವರು ಸರ್ಕಾರದ ಮುದ್ರೆ ಬಳಸಿ ವೋಟರ್ ಐಡಿ, ಪ್ಯಾನ್ ಕಾರ್ಡ್ ಆರ್ ಸಿ ಬುಕ್, ಹಾಗೂ ಇನ್ನಿತರ ದಾಖಲೆಗಳನ್ನು ಮುದ್ರಿಸಿ ಕೊಡುತ್ತಿದ್ದರು. ಇದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ವಂಚನೆ ಆಗುತ್ತಿತ್ತು.
ದಾಳಿ ವೇಳೆ ಹೆಸರು ವಿಳಾಸ ಇಲ್ಲದ 9 ಸಾವಿರ ಪ್ಯಾನ್ ಕಾರ್ಡ್ 12,200 ಆರ್ ಸಿ ಕಾರ್ಡ್ ಗಳು, 6240 ನಕಲಿ ವೋಟರ್ ಐಡಿ, 9 ಸಾವಿರ ಆಧಾರ್ ಕಾರ್ಡ್ ಸೇರಿದಂತೆ ಮಹತ್ವದ ದಾಖಲೆಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪುಟ್ಟೇನಹಳ್ಳಿ ಮುಖ್ಯರಸ್ತೆಯ 6ನೇ ಹಂತದಲ್ಲಿ ವಾಸವಾಗಿದ್ದ ಎಸ್.ಲೋಕೇಶ್ (37), ಶಾಂತಿನಗರದ ಆಂಡ್ರೆ ರಸ್ತೆಯ ವಾಸಿಗಳಾದ ಸುದರ್ಶನ್ (50), ನಿರ್ಮಲ್‍ಕುಮಾರ್ (56), ಕೆಂಗೇರಿ ಹರ್ಷಾ ಲೇಔಟ್‌ನ ದರ್ಶನ್ (25), ಹಾಸನ ಜಿಲ್ಲೆ ಬೈಪಾಸ್ ರಸ್ತೆಯ ಗವೇನಹಳ್ಳಿಯ ಶ್ರೀಧರ್ (31), ಬೆಂಗಳೂರಿನ ಜ್ಞಾನಭಾರತಿಯ ಕೆಂಚನಪುರ ಕ್ರಾಸ್‍ನ ಚಂದ್ರಪ್ಪಾ (28), ವಿಜಯನಗರದ ಮಾರೇನಹಳ್ಳಿಯ ಅಭಿಲಾಷ್ (27), ಸರಸ್ವತಿನಗರದ ಶ್ರೀಧರ ದೇಶಪಾಂಡೆ (35), ಬಸವೇಶ್ವರನಗರ ಸತ್ಯನಾರಾಯಣ ಲೇಔಟ್‌ನ ತೇಜಸ್(30) ಬಂಧಿತ ಆರೋಪಿಗಳು.
PublicNext
04/01/2021 05:00 pm