ಲಖನೌ: ಉತ್ತರ ಪ್ರದೇಶದಲ್ಲಿ ಅಕ್ರಮ ಮತಾಂತರ ನಿಗ್ರಹ ಹಾಗೂ ಲವ್ ಜಿಹಾದ್ ಕಾನೂನು ಜಾರಿಗೆ ತಂದು ಒಂದು ತಿಂಗಳು ಗತಿಸಿದೆ. ಯೋಗಿ ಸರ್ಕಾರ ಜಾರಿ ತಂದ ಹೊಸ ಕಾನೂನಿನಡಿ ಆ ರಾಜ್ಯದಲ್ಲಿ ಈವರೆಗೆ 12 ಎಫ್ಐಆರ್ ದಾಖಲಾಗಿವೆ. 35 ಮಂದಿ ಬಂಧನವಾಗಿದೆ. ಇಟಾ ಜಿಲ್ಲೆಯಲ್ಲಿ ಅತಿ ಹೆಚ್ಚು ಬಂಧನವಾಗಿದೆ. ಇಲ್ಲಿ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸೀತಾಪುರದಲ್ಲಿ 7, ಗ್ರೇಟರ್ ನೋಯ್ಡಾದಲ್ಲಿ 4, ಶಹಜಾನಪುರ್ ಮತ್ತು ಅಜಮ್ಗಡದಲ್ಲಿ ತಲಾ ಮೂವರು ವ್ಯಕ್ತಿಗಳು, ಮೊರಾದಾಬಾದ್, ಮುಜಾಫರ್ನಗರ್, ಬಿಜ್ನೋರ್ ಮತ್ತು ಕನ್ನೋಜ್ನಿಂದ ತಲಾ ಇಬ್ಬರು ಹಾಗೂ ಬರೇಲಿ ಹಾಗೂ ಹರ್ದೋಯಿಯಿಂದ ತಲಾ ಒಬ್ಬರು ವ್ಯಕ್ತಿಗಳನ್ನ ಲವ್ ಜಿಹಾದ್ ಆರೋಪದ ಮೇಲೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮತಾಂತರ ಉದ್ದೇಶದಿಂದ ವಿವಾಹವಾಗುವುದನ್ನು ತಡೆಯುವ ಉದ್ದೇಶದಿಂದ ರೂಪಿತವಾಗಿರುವ ಈ ಲವ್ ಜಿಹಾದ್ ಕಾಯ್ದೆ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳಿವೆ. ಮುಸ್ಲಿಮ್ ಧರ್ಮೀಯರ ವಿರುದ್ಧ ಅಸ್ತ್ರವಾಗಿ ಇದನ್ನ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳಿವೆ. ಹಾಗೆಯೇ, ಅಮಾಯಕ ಹಿಂದೂ ಮಹಿಳೆಯರನ್ನು ಲವ್ ಹೆಸರಿನಲ್ಲಿ ಮದುವೆಗೆ ಪುಸಲಾಯಿಸಿ ಮತಾಂತರ ಮಾಡಲಾಗುತ್ತಿರುವುದನ್ನು ತಡೆಯಲು ಈ ಕಾಯ್ದೆ ಪ್ರಬಲ ಅಸ್ತ್ರವಾಗಿದೆ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ. ಒಂದು ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಎರಡೂ ಕಡೆಯ ಸಂಗತಿಗಳು ಇವೆ.
PublicNext
26/12/2020 08:04 pm