ಕೇರಳ: ಉಗ್ರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಆರೋಪ ಹೊತ್ತ, ಖುದ್ದು ಹೈಕೋರ್ಟ್ನಿಂದಲೇ ಛೀಮಾರಿ ಹಾಕಿಸಿಕೊಂಡಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ದೇಶಾದ್ಯಂತ ದಾಳಿ ನಡೆಸಿ 106 ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿದೆ.
ಪಿಎಫ್‌ಐನ್ನು ಛಿದ್ರಗೊಳಿಸಿದ ಎನ್‌ಐಎ ಕ್ರಮಕ್ಕೆ 'ಆಪರೇಷನ್ ಆಕ್ಟೋಪಸ್' ಎಂದು ಹೆಸರಿಡಲಾಗಿದೆ. ಇದರ ಅಡಿಯಲ್ಲಿ, ಇದೇ 22 ರಂದು, ಎನ್‌ಐಎ 11 ರಾಜ್ಯಗಳಲ್ಲಿ ಪಿಎಫ್ಐನ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿತು. ತನಿಖಾ ಸಂಸ್ಥೆಯ ಈ ಕ್ರಮ ಪಿಎಫ್‌ಐ ಹಾಗೂ ಅದರ ರಾಜಕೀಯ ಮುಖವಾಣಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್‌ಡಿಪಿಐ) ನಿದ್ದೆಗೆಡಿಸಿದೆ.
ಈ ದಾಳಿಯ ಹಿಂದೆ ಆರ್‌ಎಸ್‌ಎಸ್ ಇದೆ ಎಂದು ಆಕ್ರೋಶ ಹೊರಹಾಕಿರುವ ಎಸ್‌ಡಿಪಿಐ ಮುಖಂಡನೊಬ್ಬ ಆರ್ಎಸ್ಎಸ್ಗೆ ಓಪನ್ ಚಾಲೆಂಜ್ ಮಾಡಿದ್ದಾನೆ. ದಾಳಿಯನ್ನು ಖಂಡಿಸಿ ಕೇರಳದ ಎರ್ನಾಕುಲಂನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಆಕ್ರೋಶ ವ್ಯಕ್ತಪಡಿಸಿರುವ ಮುಖಂಡ ಶಿಜು ಬಕ್ಕರ್, 'ಬಿಜೆಪಿ ಎನ್‌ಐಎ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆ ಮೂಲಕ ಪಿಎಫ್‌ಐ ಮತ್ತು ಎಸ್‌ಡಿಪಿಐ ಮುಗಿಸಲು ಸಂಚು ರೂಪಿಸುತ್ತಿದೆ. ಆರ್‌ಎಸ್‌ಎಸ್ ಮುಗಿಸಲು ನಮಗೆ ಹತ್ತೇ ಸೆಕೆಂಡು ಸಾಕು' ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.
ರಸ್ತೆ ಮಧ್ಯೆ ನಿಂತು ಕೂಗಾಡುತ್ತಿರುವ ಈತ, ಆರೆಸ್ಸೆಸ್ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದಾನೆ. 'ಒಂದೋ ಈ ದೇಶದಲ್ಲಿ ನಮ್ಮ ಆದರ್ಶಗಳು ಗೆಲ್ಲುತ್ತವೆ ಅಥವಾ ನಾವು ಹುತಾತ್ಮರಾಗುತ್ತೇವೆ, ಅಲ್ಲಾ-ಹು-ಅಕ್ಬರ್' ಎಂದಿರುವ ಈತ, 'ನೀವು ಆರ್‌ಎಸ್‌ಎಸ್ ಕತ್ತಲೆಯಲ್ಲಿ ನಮ್ಮ ಮೇಲೆ ದಾಳಿ ನಡೆಸಿದಾಗ ನಾವು ಯಾರು ಎಂದು ನಿಮಗೆ ಅರಿವಾಗಿಸಲು ಸಾಧ್ಯ. ನೀವು ರಾತ್ರಿ ನಮ್ಮ ಮೇಲೆ ದಾಳಿ ಮಾಡಿದ್ದೀರಿ, ನಾವು ಹಗಲು ಹೊತ್ತಿನಲ್ಲಿ 10 ಸೆಕೆಂಡುಗಳಲ್ಲಿ ನಿಮ್ಮನ್ನು ನಿಭಾಯಿಸುವ ಶಕ್ತಿ ಹೊಂದಿದ್ದೇವೆ ಎಂದು ಕಿರುಚಾಡಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಟಾಮ್ ವಡಕ್ಕನ್, 'ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳು ಈ ರೀತಿ ಕಿರುಚಾಡುವುದು, ಬೆದರಿಕೆ ಹಾಕುವುದು ಹೊಸದೇನಲ್ಲ. ಇವರ ಬುಡಕ್ಕೆ ಕೈಹಾಕಿ ಅವುಗಳನ್ನು ಏನು ಮಾಡಬೇಕೋ, ಅದನ್ನು ಎನ್‌ಐಎ ಮಾಡುತ್ತದೆ' ಎಂದಿದ್ದಾರೆ.
PublicNext
26/09/2022 09:28 pm