ಹೊನ್ನಾಳಿ ತಾಲೂಕಿನ ದೊಡ್ಡಕೇರಿ ಬೀರಲಿಂಗೇಶ್ವರ ದೇವಸ್ಥಾನದ ದೇವರಗಣಮಗ ಎಂದೇ ಕರೆಯಲ್ಪಡುತ್ತಿದ್ದ ಹೆಚ್. ಕೆ. ಕುಮಾರ್ ಅವರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಹೊನ್ನಾಳಿ ಸಿಪಿಐ ಮತ್ತು ತಂಡ ಬಂಧಿಸಿದೆ.
ಹೊನ್ನಾಳಿಯ ಬಿ. ಎಸ್. ಮೋಹನ್ ಸಣ್ಣರಾಯಪ್ಪ, ಹಾಸನದ ದಿನೇಶ್ ದೊರೆಸ್ವಾಮಿ, ಹರಿಹರ ತಾಲೂಕಿನ ಹಿಂಡಸಘಟ್ಟ ಕ್ಯಾಂಪ್ ನ ಕಾರ್ತಿಕ್ ಕುಮಾರ್ ನಾಯ್ಕ್, ಪರಮೇಶ್ ನಾಯ್ಕ್, ಸುನೀಲ್ ನಾಯ್ಕ್ ಬಂಧಿತ ಆರೋಪಿಗಳು.
ಕೊಲೆ ಮಾಡಲು ಬಳಸಿದ್ದ ಚಾಕು, ಕಂದ್ಲಿ, ಮೋಟಾರ್ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಕೊಲೆ ನಡೆದ ಕೇವಲ 48 ಗಂಟೆಗಳಲ್ಲಿ ಆರೋಪಿಗಳನ್ನು ಸೆರೆ ಹಿಡಿದಿರುವ ಹೊನ್ನಾಳಿ ಸಿಪಿಐ ದೇವರಾಜ್ ಅವರ ಕಾರ್ಯಕ್ಷಮತೆ, ಚಾಕಚಕ್ಯತೆಗೆ ಪ್ರಶಂಸೆ ವ್ಯಕ್ತವಾಗಿದೆ.
ರಿಯಲ್ ಎಸ್ಟೇಟ್ ನಲ್ಲಿ ತೊಡಗಿಸಿಕೊಂಡಿದ್ದ ಹಣ ವಾಪಸ್ ನೀಡುತ್ತೇವೆ ಎಂದು ಹೇಳಿ ಕುಮಾರ್ ನನ್ನು ಕರೆಯಿಸಿದ್ದಾರೆ. ಕಾರಿನಲ್ಲಿ ಹೆಚ್. ಕಡದಕಟ್ಟೆ ಬಳಿಯ ಟವರ್ ಬಳಿಯ ಜಮೀನಿಗೆ ಕುಮಾರ್ ಬಂದಿದ್ದಾರೆ. ಆಗ ಹೊಂಚು ಹಾಕಿ ಕುಳಿತಿದ್ದ ಮೂವರು ಪಾತಕಿಗಳು ಕುಮಾರ್ ಅವರ ಕುತ್ತಿಗೆಗೆ ಹಿಂದಿನಿಂದ ಟವಲ್ ಹಾಕಿ ಬಿಗಿದು ಕುತ್ತಿಗೆಗೆ ನಾಲ್ಕೈದು ಬಾರಿ ಚಾಕುವಿನಿಂದ ಇರಿದಿದ್ದಾರೆ. ಕಂದ್ಲಿ (ಮಚ್ಚು)ಯಿಂದ ಹಲ್ಲೆ ಮಾಡಿ ಕೊಂದು ಹಾಕಿದ್ದಾರೆ ಎಂದು ಸಿಪಿಐ ದೇವರಾಜ್ ಅವರು ಮಾಹಿತಿ ನೀಡಿದ್ದಾರೆ.
PublicNext
26/05/2022 11:15 am