ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿಯನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.
ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಶಿವಮೂರ್ತಿ ಮುರುಘಾ ಶರಣರನ್ನು ಸೆ.1ರಂದು ಬಂಧಿಸಲಾಗಿದೆ. ಅವರಿಗೆ ಜಾಮೀನು ಕೋರಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಸೆ.2ರಂದು ಶರಣರ ಪರ ವಕೀಲರು ವಾದ ಮಂಡಿಸಿದ್ದರು. ಇದಕ್ಕೆ ಪ್ರತಿವಾದ ಮಂಡಿಸಿದ ಸರಕಾರಿ ವಿಶೇಷ ಅಭಿಯೋಜಕರು 'ಆರೋಪಿ ಪ್ರಭಾವಿಯಾಗಿರುವುದರಿಂದ ಸಾಕ್ಷ್ಯನಾಶ ಮಾಡುವ, ಒತ್ತಡ ಹೇರುವ ಸಾಧ್ಯತೆ ಇದೆ' ಎಂದು ಆತಂಕ ವ್ಯಕ್ತಪಡಿಸಿದ್ದರು. ವಾದ ಪ್ರತಿವಾದ ಆಲಿಸಿದ ಎರಡನೇ ಹೆಚ್ಚುವರಿ ಜಿಲ್ಲಾಮತ್ತು ಸತ್ರ ನ್ಯಾಯಾಧೀಶರಾದ ಬಿ.ಕೆ.ಕೋಮಲ ಅವರು ಶುಕ್ರವಾರ ಜಾಮೀನು ಅರ್ಜಿ ವಜಾಗೊಳಿಸಿದರು.
ಚಿತ್ರದುರ್ಗಕ್ಕೆ ವಾಪಸ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಶರಣರನ್ನು ಶಿವಮೊಗ್ಗದ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲು ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿತ್ತು. ಅದಂತೆ ಅವರನ್ನು ಬುಧವಾರ ರಾತ್ರಿ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಕರೆತರಲಾಗಿತ್ತು. ಸದ್ಯ ಆರೋಗ್ಯ ಸ್ಥಿರವಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಶರಣರನ್ನು ಆಸ್ಪತ್ರೆಯಿಂದ ಚಿತ್ರದುರ್ಗದ ಕಾರಾಗೃಹಕ್ಕೆ ವಾಪಸ್ ಕರೆದೊಯ್ಯಲಾಗಿದೆ.
PublicNext
24/09/2022 09:44 am