ಬಿಹಾರ : ಕಳೆದ 8 ತಿಂಗಳಿನಿಂದ ನಕಲಿ ಪೊಲೀಸ್ ಠಾಣೆವೊಂದು ಕಾರ್ಯನಿರ್ವಹಿಸಿದ ಘಟನೆ ಬಿಹಾರದ ಬಂಕಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.ನಕಲಿ ಪೊಲೀಸರು ಆಗಾಗ ಸಿಕ್ಕಿಬೀಳುವುದನ್ನು ನೋಡಿದ್ದೇವೆ ಆದ್ರೆ ಇಲ್ಲಿ ಠಾಣೆಯೇ ನಕಲಿ ಎನ್ನುವುದು ಆಶ್ಚರ್ಯಕರವಾಗಿದೆ.
ಇಷ್ಟು ದಿನಗಳ ಕಾಲ ಈ ನಕಲಿ ಪೊಲೀಸ್ ಠಾಣೆ ಬಗ್ಗೆ ಊರಿನ ಯಾರೊಬ್ಬರಿಗೂ ಅನುಮಾನ ಬಂದಿರಲಿಲ್ಲ. ಬಂಕಾದ ಗೆಸ್ಟ್ ಹೌಸ್ ವೊಂದನ್ನೇ ಇವರು ಪೊಲೀಸ್ ಠಾಣೆಯನ್ನಾಗಿ ಬದಲಾಯಿಸಿದ್ದರು. ಫೋರ್ಜರಿ ಮೂಲಕ ಸ್ಥಳೀಯ ಬಡ ಜನರಿಂದ ಹಣ ವಸೂಲಿ ಮಾಡುವ ಕೆಲಸವನ್ನು ಇವರು ಮಾಡುತ್ತಿದ್ದರು.
ಕಾನ್ಸ್ ಟೇಬಲ್ ನಿಂದ ಇನ್ಸ್ಪೆಕ್ಟರ್ ವರೆಗೆ ಇಲ್ಲಿ ವ್ಯಕ್ತಿಗಳಿದ್ದರು. ಯಾರೇ ನೋಡಿದರೂ, ನಿಜವಾದ ಪೊಲೀಸ್ ಆಫೀಸರ್ ಗಳು ಎನ್ನುವಷ್ಟು ಅದ್ಭುತವಾಗಿ ಇವರೆಲ್ಲಾ ನಾಟಕವಾಡಿದ್ದ ಘಟನೆ ಬೆಳಕಿಗೆ ಬಂದಿದೆ.
ಸದ್ಯ ಕ್ರಿಮಿನಲ್ ಒಬ್ಬನನ್ನು ಬಂಧಿಸಿ ಠಾಣೆಗೆ ಹಿಂತಿರುಗುತ್ತಿದ್ದ ವೇಳೆ, ಈ ಕುರಿತಾಗಿ ನನಗೆ ಗುಪ್ತ ಮಾಹಿತಿ ಸಿಕ್ಕಿತ್ತು ಎಂದು ಬಂಕಾ ಎಸ್ ಎಚ್ ಓ ಶಂಭು ಪ್ರಸಾದ್ ಯಾದವ್ ತಿಳಿಸಿದ್ದಾರೆ. ಪೊಲೀಸ್ ಠಾಣೆಯ ರೀತಿಯದ್ದ ಬಂಕಾ ಗೆಸ್ಟ್ ಹೌಸ್ ಗೆ ಹೋದಾಗ, ಅನಾಮಿಕ ಮಹಿಳೆ ಹಾಗೂ ಯುವಕನೊಬ್ಬ ಪೊಲೀಸ್ ಸಮವಸ್ತ್ರದೊಂದಿಗೆ ರಸ್ತೆಯ ಮೇಲೆ ನಿಂತಿದ್ದರು. ಅನುಮಾನ ಬಂದು ಇವರನ್ನು ವಿಚಾರಣೆ ಮಾಡಿದಾಗ ಸಂಪೂರ್ಣ ಮಾಹಿತಿ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.
ಪಾಟ್ನಾ ಸ್ಕಾರ್ಟ್ ಟೀಮ್ ಹೆಸರಿನಲ್ಲಿ ಬಂಕಾದಲ್ಲಿ ಕಚೇರಿ ನಡೆಸುತ್ತಿದ್ದ ಸಂಪೂರ್ಣ ವಂಚಕರ ತಂಡ ಇದಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಸತ್ಯ ಪ್ರಕಾಶ್ ತಿಳಿಸಿದ್ದಾರೆ.
PublicNext
18/08/2022 05:09 pm