ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬಪ್ಪನಾಡು ಚೆಕ್ ಪಾಯಿಂಟ್ ಬಳಿ ಮುಲ್ಕಿ ಪೊಲೀಸ್ ಇನ್ಸ್ ಪೆಕ್ಟರ್ ಜೊತೆ ಅಸಭ್ಯವಾಗಿ ವರ್ತಿಸಿದ ಬಜ್ಪೆ ಮೂಲದ ನಾಲ್ವರನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಆಲ್ಟೊ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬಜಪೆ ಮೂಲದ ಮೂವರು ಯುವಕರನ್ನು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಪ್ರದೇಶವಾದ ಬಪ್ಪನಾಡು ಚೆಕ್ ಪಾಯಿಂಟ್ ಬಳಿ ಮುಲ್ಕಿ ಪೊಲೀಸರು ತಪಾಸಣೆಗೆ ನಿಲ್ಲಿಸಿದಾಗ ಕಾರಿನಲ್ಲಿದ್ದವರು ಉಡಾಫೆಯಾಗಿ ವರ್ತಿಸಿದ್ದಾರೆ.
ಈ ಸಂದರ್ಭ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುಲ್ಕಿ ಠಾಣಾ ಇನ್ಸ್ ಪೆಕ್ಟರ್ ಕುಸುಮಾಧರ್ ಕಾರನ್ನು ನಿಲ್ಲಿಸಲು ಹೇಳಿದ್ದರೂ ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಾರಿನ ಚಾಲಕ ಏಕಾಏಕಿ ಕಾರನ್ನು ಮುಂದಕ್ಕೆ ಓಡಿಸಿದ್ದಾನೆ. ಕೂಡಲೇ ಇನ್ಸ್ ಪೆಕ್ಟರ್ ಕಾರ್ಯಪ್ರವೃತ್ತರಾಗಿ ಕಾರನ್ನು ನಿಲ್ಲಿಸಿ ಚಾಲಕನನ್ನು ಇಳಿಯುವಂತೆ ಸೂಚನೆ ನೀಡಿದ್ದಾರೆ. ಈ ಸಂದರ್ಭ ಕಾರಿನ ಚಾಲಕ ಹೊರಗೆ ಇಳಿದು ಹೈಡ್ರಾಮ ಮಾಡಿ ಪೊಲೀಸರನ್ನು ನಿಂದಿಸಿ ರಕ್ಷಿಸುವಂತೆ ಬೊಬ್ಬೆ ಹಾಕಿದ್ದಾನೆ.
ಆದರೆ ಸ್ಥಳೀಯರಿಗೆ ಆರೋಪಿಗಳ ನಾಟಕ ಗೊತ್ತಾಗಿದ್ದು ಕೂಡಲೇ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತಿದ್ದಾರೆ.ಸಾರ್ವಜನಿಕ ಸ್ಥಳದಲ್ಲಿ ಪೊಲೀಸರ ತಪಾಸಣೆಗೆ ಸಂದರ್ಭ ಬೆದರಿಕೆ ಒಡ್ಡಿದ ವಿರುದ್ಧ ಯುವಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
PublicNext
09/08/2022 09:38 pm