ಬೆಂಗಳೂರು: ನಗರದ ಐಷಾರಾಮಿ ಹೋಟೆಲ್ ದಿ ಪಾರ್ಕ್‌ನಲ್ಲಿ ನಡೆದ ರೇವ್ ಪಾರ್ಟಿ ಮತ್ತು ಡ್ರಗ್ಸ್ ಸೇವನೆ ಪ್ರಕರಣದ ತನಿಖೆಯನ್ನು ಹಲಸೂರು ಪೊಲೀಸರು ಚುರುಕುಗೊಳಿಸಿದ್ದಾರೆ. ದೇಶ ಮತ್ತು ವಿದೇಶದ 40 ಜನ ಮಾಡೆಲ್ಗಳಿಗೆ ನೋಟಿಸ್ ನೀಡಿದ್ದಾರೆ. ಎಲ್ಲರಿಗೂ ಒಂದು ವಾರದೊಳಗೆ ತನಿಖೆಗೆ ಹಾಜರಾಗುವಂತೆ ತಿಳಿಸಲಾಗಿದೆ.
ಜೂನ್ 12ರಂದು ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರ ಸಹೋದರ ಸಿದ್ಧಾರ್ಥ್ ಕಪೂರ್ ಭಾಗವಹಿಸಿದ್ದ ಪಾರ್ಟಿಯಲ್ಲಿ ಸುಮಾರು 150 ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಡ್ರಗ್ಸ್ ಸೇವನೆ ಸಂಬಂಧ ಹಲಸೂರು ಪೊಲೀಸರು ದಾಳಿ ಮಾಡಿ ಹಲವರನ್ನು ಬಂಧಿಸಿದ್ದಾರೆ. ಇದರಲ್ಲಿ ಬಾಲಿವುಡ್ ನಟ ಸಿದ್ಧಾರ್ಥ್ ಕಪೂರ್ ಸೇರಿ ಆರು ಮಂದಿ ಡ್ರಗ್ಸ್ ಸೇವಿಸಿರುವುದು ಸಾಬೀತಾಗಿತ್ತು.ಈ ಹಿಂದೆ ಆರು ಮಹಿಳಾ ಮಾಡೆಲ್ಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿ ಅವರ ಹೇಳಿಕೆ ದಾಖಲಿಸಿಕೊಂಡಿದ್ದರು. ಆದರೆ, ಇನ್ನೂ ಹಲವು ಮಾಡೆಲ್‌ಗಳು ಮತ್ತು ಸೆಲೆಬ್ರಿಟಿಗಳ ವಹಿವಾಟು ಮತ್ತು ಅವರ ಸಂಪರ್ಕಗಳ ಬಗ್ಗೆ ಕೆಲವು ಸಂಶಯಗಳು ಕಾಡುತ್ತಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ, ಈ ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಕೆಲ ವಿದೇಶಿಯರು ತಮ್ಮ ವೀಸಾ ಅವಧಿ ಮುಗಿದ ಮೇಲೂ ಅಕ್ರಮವಾಗಿ ನೆಲೆಸಿದ್ದಾರೆ ಎಂಬುವುದು ತನಿಖೆಯ ವೇಳೆ ಬಯಲಾಗಿದೆ ಎಂದು ಹೇಳಲಾಗುತ್ತಿದೆ.
ಪ್ರಕರಣದಲ್ಲಿ ಆರೋಪಿಯಾಗಿರುವ ಸಿದ್ಧಾರ್ಥ್ ಕಪೂರ್ ಸೇರಿ ಆರು ಜನರನ್ನು ಪೊಲೀಸರು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ರು. ಪೊಲೀಸ್ ವಿಚಾರಣೆಯಲ್ಲಿ ಸಿದ್ಧಾರ್ಥ್ ಕಾಪೂರ್, "ಸ್ನೇಹಿತರು ನೀರು ಮತ್ತು ಸಿಗರೇಟ್‌ನಲ್ಲಿ ಡ್ರಗ್ಸ್ ಮಿಶ್ರಣ ಮಾಡಿ ನನಗೆ ಕೊಟ್ಟಿದ್ದಾರೆ. ಇದನ್ನು ಅರಿಯದೇ ಕುಡಿದು ಸಿಗರೇಟ್ ಸೇವನೆ ಮಾಡಿದ್ದೆ" ಎಂದು ಹೇಳಿಕೆ ಕೊಟ್ಟಿರೋದು ಹಾಸ್ಯಸ್ಪದ ಎನಿಸಿದೆ.
PublicNext
21/06/2022 10:47 pm