ದಾವಣಗೆರೆ: ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಬೆಳಿಗ್ಗೆ ಖಾಸಗಿ ಬಸ್ ಏಜೆಂಟ್ ನನ್ನು ಚಾಕುವಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿವೆ.
ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಜಾಕೀರ್ ಹತ್ಯೆಗೀಡಾದ ಏಜೆಂಟ್ ಎಂದು ಗುರುತಿಸಲಾಗಿದೆ. ಚನ್ನಗಿರಿ ಪಟ್ಟಣದ ಕೈಮರ ಎಂಬಲ್ಲಿನ ತರಳಬಾಳು ವೃತ್ತದಲ್ಲಿ ಈ ಘಟನೆ ನಡೆದಿದೆ.
ಎಂದಿನಂತೆ ನಲ್ಲೂರಿನಿಂದ ಚನ್ನಗಿರಿಗೆ ಜಾಕೀರ್ ಬಂದಿದ್ದಾರೆ. ಶಿವಮೊಗ್ಗ- ದಾವಣಗೆರೆ-ಭದ್ರಾವತಿ- ಚನ್ನಗಿರಿ ಪಟ್ಟಣಕ್ಕೆ ಹೋಗುವ ವೃತ್ತ ಇದು. ಇಲ್ಲಿಗೆ ಜಾಕೀರ್ ಆಗಮಿಸುತ್ತಿದ್ದಂತೆ ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬ ಏಕಾಏಕಿಯಾಗಿ ಚಾಕುವಿನಿಂದ ಚುಚ್ಚಿದ್ದಾನೆ. ರಕ್ತಸಿಕ್ತವಾಗಿ ಬಿದ್ದಿದ್ದರೂ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾನೆ.
ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ನಡೆದ ಈ ಘಟನೆ ನೋಡಿದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಜಾಕೀರ್ ಮೇಲೆ ಮಾರಣಾಂತಿಕವಾಗಿ ಚುಚ್ಚುವಾಗ ಸ್ಥಳದಲ್ಲಿ ಕೆಲವರು ಇದ್ದರು. ಬಿಡಿಸಲು ಪ್ರಯತ್ನ ನಡೆಸಿದರು. ಮನಬಂದಂತೆ ಚುಚ್ಚುತ್ತಿದ್ದ ಕಾರಣ ಹತ್ತಿರ ಹೋಗಲು ಹೆದರಿದರು. ಬಳಿಕ ಆರೋಪಿ ಪರಾರಿಯಾಗಿದ್ದಾನೆ.
ಪ್ರಾಥಮಿಕ ಮಾಹಿತಿ ಪ್ರಕಾರ ಅನೈತಿಕ ಸಂಬಂಧ ಅಥವಾ ಆಸ್ತಿ ವಿವಾದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಜಾಕೀರ್ ಗೆ ಪರಿಚಯವಿದ್ದವನೇ ಈ ಕೃತ್ಯ ಎಸಗಿರಬಹುದು ಎಂಬ ಅನುಮಾನ ಪೊಲೀಸರದ್ದಾಗಿದೆ. ಪ್ರತ್ಯಕ್ಷವಾಗಿ ನೋಡಿದ ಜನರು ಈ ಘಟನೆಗೆ ದಿಗ್ಭ್ರಮೆಯಾಗಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಇಂಥ ಕೃತ್ಯ ನಡೆದಿರುವುದು ಭಯಭೀತಕ್ಕೆ ಕಾರಣವಾಗಿದೆ.
PublicNext
21/06/2022 01:42 pm