ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ರಾಪ್ತೆಯೊಂದಿಗೆ ಮದುವೆಯಾಗಿ ಲೈಂಗಿಕ ಕಿರುಕುಳ: ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ

ದಾವಣಗೆರೆ: ಕಳೆದ 5 ವರ್ಷಗಳ ಹಿಂದೆ ಅಪ್ರಾಪ್ತೆಯೊಂದಿಗೆ ಮದುವೆಯಾಗಿ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣವೊಂದರ ಆರೋಪಿಗೆ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೋಕ್ಸೋ ಕಾಯ್ದೆಯಡಿ 10 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 35 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ದಾವಣಗೆರೆಯ ಪಿಜಿ ಯಲ್ಲಿ ಇದ್ದುಕೊಂಡು ಎವಿಕೆ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಉದಯ್ ಎಂಬಾತ, ಪ್ರೀತಿಸುವುದಾಗಿ ನಂಬಿಸಿ, ಹೆದರಿಸಿ, ಪುಸಲಾಯಿಸಿಕೊಂಡು ಕರೆದುಕೊಂಡು ಹೋಗಿ, ಮಂತ್ರಾಲಯದಲ್ಲಿ ಅವಳ ಕೊರಳಿಗೆ ತಾಳಿ ಕಟ್ಟಿದ್ದ. ಅಲ್ಲಿಂದ ವಿಜಯವಾಡ, ನಂತರ ಬಸವನ ಕ್ಯಾಂಪ್ ನಲ್ಲಿನ ತಮ್ಮ ಸಮೀಪದ ಬಂಧುಗಳ ಮನೆಗೆ ಕರೆದುಕೊಂಡು ಹೋಗಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಹಲವು ಬಾರಿ ಲೈಂಗಿಕ ಅತ್ಯಾಚಾರ ನಡೆಸಿದ್ದ.

ಈ ಬಗ್ಗೆ ಅಪ್ರಾಪ್ತೆಯ ತಾಯಿ ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಗ್ರಾಮವೊಂದರ ಮಹಿಳೆ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ 2017 ರಲ್ಲಿ ದೂರು ದಾಖಲಿಸಿದ್ದರು.

ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯ ತನಿಖಾಧಿಕಾರಿ ನಾಗಮ್ಮ ಕೆ. ಅವರು, ಪ್ರಕರಣದ ಬಗ್ಗೆ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ದಾವಣಗೆರೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವೂ ಆಗಿರುವ ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಪಾದ್ ಎನ್ ಅವರು, ಆರೋಪಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 35 ಸಾವಿರ ರೂ. ಗಳ ದಂಡ ವಿಧಿಸಿದ್ದು, ಸಂತ್ರಸ್ತೆಗೆ ಪರಿಹಾರವಾಗಿ 4.33 ಲಕ್ಷ ರೂ. ನೀಡುವಂತೆ ಜಿಲ್ಲಾ ಉಚಿತ ಸೇವಾ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಿದೆ.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ರೇಖಾ ಎಸ್. ಕೋಟೆಗೌಡರ್ ಅವರು ಪೋಕ್ಸೋ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಅಪ್ರಾಪ್ತೆಯೊಂದಿಗೆ ಮದುವೆ ಮಾಡಿಕೊಳ್ಳುವುದು ಹಾಗೂ ಲೈಂಗಿಕ ಕಿರುಕುಳ ನೀಡುವುದು ಪೋಕ್ಸೋ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ರೇಖಾ ಅವರು ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

09/04/2022 01:34 pm

Cinque Terre

37.98 K

Cinque Terre

1