ಮುಂಬೈ : ಡ್ರಗ್ ಕೇಸ್ ನಲ್ಲಿ ಬಂಧನವಾಗಿರುವ ಆರ್ಯನ್ ಖಾನ್ ಅವರನ್ನುಎನ್ ಸಿಬಿ ಅಧಿಕಾರಿಗಳು ಇಂದು ಮುಂಬೈ ಕಿಲ್ಲಾ ಕೋರ್ಟ್ ಎದುರು ಹಾಜರುಪಡಿಸಿದ್ದರು. ಈ ವೇಳೆ ಆರ್ಯನ್ ಕಸ್ಟಡಿ ಅವಧಿಯನ್ನು ಅಕ್ಟೋಬರ್ 13ರವರೆಗೆ ವಿಸ್ತರಿಸುವಂತೆ ಕೋರ್ಟ್ ಗೆ ಎನ್ ಸಿಬಿ ಕೋರಿತು ಆದರೆ, ಅಕ್ಟೋಬರ್ 7ರವರೆಗೆ ಎನ್ ಸಿಬಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಇನ್ನು ಎನ್ ಸಿಬಿ ಪರ ಎಎಸ್ ಜಿ ಅನಿಲ್ ಸಿಂಗ್ ವಾದ ಮಂಡನೆ ಮಾಡಿದರು. ‘ಶಿಪ್ ಮೇಲೆ ದಾಳಿ ಮಾಡಿದಾಗ ಮಾದಕ ವಸ್ತು ಜಪ್ತಿ ಮಾಡಿದ್ದೇವೆ. ಡ್ರಗ್ಸ್ ಪೆಡ್ಲರ್ ಜೊತೆ ಚಾಟ್ ಮಾಡಿರುವ ವಿವರ ಸಿಕ್ಕಿದೆ. ಡ್ರಗ್ಸ್ ಲಿಂಕ್ ಬಹಿರಂಗಗೊಳಿಸಲು ಕಸ್ಟಡಿಗೆ ನೀಡಬೇಕು.
ಅಂತಾರಾಷ್ಟ್ರೀಯ ಡ್ರಗ್ಸ್ ವ್ಯವಹಾರ ಬಗ್ಗೆಯೂ ಕಣ್ಣಿಟ್ಟಿದ್ದೇವೆ. ಅಂತಾರಾಷ್ಟ್ರೀಯ ಡ್ರಗ್ಸ್ ವ್ಯವಹಾರವೂ ನಡೆದಿರುವ ಶಂಕೆ ಇದೆ. ಇನ್ನೂ ಕೆಲವು ಆರೋಪಿಗಳ ಗುರುತು ಪತ್ತೆ ಹಚ್ಚಬೇಕಿದೆ. ವಾಟ್ಸ್ ಆ್ಯಪ್ನಲ್ಲಿ ಕೋಡ್ ಪದಗಳನ್ನು ಬಳಸಿ ಚಾಟಿಂಗ್ ಮಾಡಲಾಗಿದೆ. ಮೊಬೈಲ್ನಲ್ಲಿ ಹಣ ವರ್ಗಾವಣೆ ಮಾಹಿತಿ ಕೂಡ ಸಿಕ್ಕಿದೆ’ ಎಂದರು.
ಆದರೆ, ಆರ್ಯನ್ ಪರ ವಕೀಲ ಸತೀಶ್ ಮಾನೇಶಿಂದೆ ಇದನ್ನು ಅಲ್ಲಗಳೆದಿದ್ದಾರೆ. ‘ಆರ್ಯನ್ ಅಲ್ಲಿ ಅತಿಥಿ ಆಗಿದ್ದರು. ಹೀಗಾಗಿ, ಅವರಿಗೆ ಟಿಕೆಟ್ ಇರಲಿಲ್ಲ. ಬೋರ್ಡಿಂಗ್ ಪಾಸ್ ಕೂಡ ಇರಲಿಲ್ಲ. ಅವರ ಬ್ಯಾಗ್ ಶೋಧ ಮಾಡಿದಾಗ ಅದರಲ್ಲಿ ಏನು ಪತ್ತೆ ಆಗಿಲ್ಲ’ ಎಂದು ಸತೀಶ್ ಮಾನೇಶಿಂದೆ ನ್ಯಾಯಾಲಯಕ್ಕೆ ತಿಳಿಸಿದರು.
ಆರ್ಯನ್ ಮೊಬೈಲ್ ನಲ್ಲಿ ಸಿಕ್ಕ ಪ್ರಮುಖ ಮಾಹಿತಿ ಹಾಗೂ ವಾಟ್ಸ್ ಆ್ಯಪ್ ಚಾಟ್ ಗಳನ್ನು ಇಟ್ಟುಕೊಂಡು ಎನ್ ಸಿಬಿ ಪರ ವಕೀಲರು ವಾದ ಮಂಡಿಸಿದ್ದರು. ಹೀಗಾಗಿ, ಕೋರ್ಟ್ ಹೆಚ್ಚಿನ ವಿಚಾರಣೆಗೆ ಎನ್ ಸಿಬಿಗೆ ಅವಕಾಶ ನೀಡಿದೆ.
PublicNext
04/10/2021 06:59 pm